ಹೊಸದಿಲ್ಲಿ: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾ ಹರಡುವಿಕೆಗಿಂತ ಸೋಂಕಿನಿಂದ ಸುಧಾರಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.
ಇದು ಒಂದು ಕಡೆ ಜನರ ನೆಮ್ಮದಿಗೂ ಕಾರಣವಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವ ಪ್ರಮಾಣ ಶೇ.91.34ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬೆಳಗ್ಗೆ ಬಿಡುಗಡೆ ಮಾಡಿದ ಮಾಹಿತಿಯಂತೆ, ಒಟ್ಟು 74,32,829 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,82,649ಕ್ಕೆ ಇಳಿಕೆಯಾಗಿದೆ.
ಸೋಂಕಿನ ಮರಣ ಪ್ರಮಾಣವು ಶೇ.1.49ಕ್ಕೆ ಇಳಿಕೆಯಾಗಿದೆ.
24 ಗಂಟೆಗಳ ಅವಧಿಯಲ್ಲಿ 48,648 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 81.37 ಲಕ್ಷ ತಲುಪಿದೆ.
ಇದೇ ಅವಧಿಯಲ್ಲಿ 551 ಸಾವುಗಳು ವರದಿಯಾಗಿದ್ದು, ಮೃತರ ಸಂಖ್ಯೆ 1,21,641ಕ್ಕೆ ಏರಿಕೆಯಾಗಿದೆ.
''ಅಧಿಕ ತಪಾಸಣೆ, ಸೋಂಕಿತರ ಸಂಪರ್ಕ ಪತ್ತೆ ಹಾಗೂ ಸಕಾಲಿಕ ಚಿಕಿತ್ಸೆಯಿಂದಾಗಿ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ದೇಶದಲ್ಲಿಪ್ರತಿ 10 ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ 88 ಇದೆ. ದೇಶದ 23 ರಾಜ್ಯಗಳಲ್ಲಿ ಮರಣ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ,'' ಎಂದು ಸಚಿವಾಲಯ ತಿಳಿಸಿದೆ.
ಮರಣ ಪ್ರಮಾಣ ಎಲ್ಲಿ ಜಾಸ್ತಿ?
• ಮಹಾರಾಷ್ಟ್ರ 36.04%
• ಕರ್ನಾಟಕ 9.16%
• ತಮಿಳುನಾಡು 9.12%
• ಉತ್ತರ ಪ್ರದೇಶ 5.76%
• ಪಶ್ಚಿಮ ಬಂಗಾಳ 5.58%
PublicNext
01/11/2020 09:20 am