ಹಾವೇರಿ: ಕಳೆದ ಒಂದು ತಿಂಗಳಿಂದ ಶಾಂತವಾಗಿದ್ದ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಎದುರೆ ಧರಣಿ ಮಾಡಲು ಆ ಸಮುದಾಯ ಮುಂದಾಗಿದೆ. ಒಂದು ದಿನದ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ, ಸರ್ಕಾರಕ್ಕೆ ಸಮುದಾಯದ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕಳೆದೆರಡೂ ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದ್ರೂ ಇಲ್ಲಿಯವರೆಗೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇದರಿಂದಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಮುಂದಾಗಿದೆ. ಮೀಸಲಾತಿಗಾಗಿ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ದೊಡ್ಡ ಮಟ್ಟದ ಪಾದಯಾತ್ರೆ ಮಾಡಲಾಯಿತು, ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಯಿತು. ಇದರ ಫಲವಾಗಿ ಸಿಎಂ ಬಸವರಾಜ ಬೊಮ್ಮಾಯಿ ಆರು ತಿಂಗಳೊಳಗಾಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಈ ವರೆಗೂ ಕೊಟ್ಟ ಮಾತನ್ನ ಸರ್ಕಾರ ಉಳಿಸಿಕೊಂಡಿಲ್ಲ. ಸರ್ಕಾರ ನಾಲ್ಕನೇ ಬಾರಿಗೆ ಕೊಟ್ಟ ಮಾತನ್ನ ತಪ್ಪಿದೆ. ಹಾಗಾಗಿ ನಾಳೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಿಎಂ ನಿವಾಸದ ಮುಂದೆ ಧರಣಿ ನಡೆಸಲು ಮುಂದಾಗಿದೆ. ಧರಣಿಯ ನಂತರವೂ ಮೀಸಲಾತಿ ಸಿಗದೇ ಹೋದರೆ ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ಬೆಂಗಳೂರು ಚಲೋ ನಡೆಸಲಿದ್ದೇವೆ. 25 ಲಕ್ಷ ಸಮುದಾಯದ ಜನರ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕೇವಲ ಆಶ್ವಾಸನೆ ನೀಡುವ ಕೆಲಸವನ್ನೇ ಮಾಡುತ್ತಿದೆ. ಹೀಗಾಗಿ ನಾವು ಕೊನೆಯ ಹಂತದ ಹೋರಾಟಕ್ಕೆ ಮುಂದಾಗಿದ್ದೇವೆ. ಸರ್ಕಾರದ ಸುಳ್ಳು ಆಶ್ವಾಸನೆಗೆ ನಮ್ಮ ಸಮುದಾಯದ ಜನ ಬೇಸತ್ತು ಹೋಗಿದ್ದಾರೆ. ಇದು ನಮ್ಮಅಂತಿಮ ಹಂತದ ಹೋರಾಟ. ಈ ಹೋರಾಟಕ್ಕೆ ಸರ್ಕಾರ ಮಣಿಯದಿದ್ದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧ. 25 ಲಕ್ಷ ಜನರನ್ನ ಸೇರಿಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಅಕ್ಟೋಬರ್- ನವೆಂಬರ್ ನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನಾವು ರಾಜಕೀಯ ಲಾಭಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿಗಾಗಿ ಮೀಸಲಾತಿ ಕೇಳುತ್ತಿದ್ದೇವೆ ಎಂದು ನಾಯಕರು ವಾಗ್ದಾಳಿ ನಡೆಸಿದ್ರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ನಾ ಕೊಡೆ ನೀ ಬಿಡೆ ಎನ್ನುವಂತಾಗಿದೆ. ಆದ್ರೂ ಪಂಚಮಸಾಲಿ ಸಮುದಾಯ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗುತ್ತಿದೆ. ಈ ಹೋರಾಟದಿಂದಲಾದ್ರೂ 2 ಮೀಸಲಾತಿ ಸಿಗುತ್ತಾ ಎಂದು ಕಾಯ್ದು ನೋಡಬೇಕಿದೆ.
PublicNext
20/09/2022 03:28 pm