ಹಾವೇರಿ: ಅಕ್ಟೋಬರ್ 5 ಮತ್ತು 6ರಂದು ಹಾವೇರಿಯಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿದೆ ಎಂದು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಬಳಿಗಾರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಸಾವಯವ ಕೃಷಿಕರ ಬಳಗ ಮತ್ತು ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಾವೇರಿಯ ಹೊಸಮಠ ಸಭಾಭವನದಲ್ಲಿ ಎರಡು ದಿನಗಳ ವರೆಗೆ ಸೊಪ್ಪು ಮೇಳ ನಡೆಯಲಿದೆ ಎಂದು ಬಳಿಗಾರ್ ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಸೊಪ್ಪಿನ ಮಹತ್ವ ಸಾರಲು ಮತ್ತು ಸಾವಯವ ಸೊಪ್ಪಿನ ಬೆಳೆ ಉತ್ತೇಜಿಸಲು ಈ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 100ಕ್ಕೂ ಅಧಿಕ ಸೊಪ್ಪುಗಳ ಪ್ರದರ್ಶನ ನಡೆಯಲಿದೆ. ಹಾವೇರಿ ಜಿಲ್ಲೆ ಸೇರಿದಂತೆ ಬೆಳಗಾವಿ, ತುಮಕೂರು ಜಿಲ್ಲೆಯ ರೈತರ ಗುಂಪುಗಳು ವಿಶೇಷ ಸೊಪ್ಪುಗಳ ಪ್ರದರ್ಶನ ಮಾಡಲಿದ್ದಾರೆ. ಈ ಮಧ್ಯೆ ಮಾರಾಟ ಸಹ ನಡೆಯಲಿದೆ ಎಂದು ಬಳಿಗಾರ್ ಹೇಳಿದರು.
ಸೊಪ್ಪುಮೇಳದ ಅಂಗವಾಗಿ ಸೊಪ್ಪುಗಳ ಕುರಿತಂತೆ ಚಿತ್ರಸ್ಪರ್ಧೆ ಮತ್ತು ಸೊಪ್ಪಿನ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಬಹುವರ್ಣದ ಸೊಪ್ಪಿನ ಬೀಜಗಳ ಮಾರಾಟ ನಡೆಯಲಿದ್ದು, ತರಕಾರಿ ಬೀಜ ಮತ್ತು ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣಿನ ಗಿಡಗಳ ಮಾರಾಟ ಸಹ ನಡೆಯಲಿದೆ ಎಂದು ಬಳಿಗಾರ್ ತಿಳಿಸಿದರು.
PublicNext
04/10/2024 08:56 am