ಕಲಬುರಗಿ: ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತ ತಕ್ಷಣವೇ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಸೂಚಿಸಿದ್ದಾರೆ.
ಜಾಗತಿಕ ಬಂಡವಾಳ ಹೂಡಿಕೆ ಸಂಬಂಧ ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ನಿರಾಣಿ ಅವರು, ಕಲಬುರಗಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಭಾನುವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಜಿಲ್ಲೆಯ ಸಮಗ್ರ ಚಿತ್ರಣ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡು ಕೆಲವು ಸೂಚನೆಗಳನ್ನು ನೀಡಿದ್ದಾರೆ.
ಈ ಕುರಿತು ಅಮೆರಿಕಾದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಿರಾಣಿ ಅವರು, ಜಿಲ್ಲೆಯಲ್ಲಿ ಮಳೆ ಪರಿಹಾರ ಕಾರ್ಯ ತೆಗೆದುಕೊಳ್ಳಲು ಸೂಚಿಸಿರುವುದಾಗಿ ಹೇಳಿದ್ದಾರೆ. ಅಮೆರಿಕಾ ಪ್ರವಾಸದಲ್ಲಿದ್ದರೂ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಕ್ಣಣಕ್ಣಣಕ್ಕೂ ಸಂಬಂಧ ಪಟ್ಟ ಅಧಿಕಾರಿಗಳಿಂದ ಪಡೆಯುತ್ತಿದ್ದೇನೆ, ಜನ ಮತ್ತು ಜಾನುವಾರುಗಳ ರಕ್ಷಣೆಗೆ ಆದ್ಯತೆ ಕೊಡಬೇಕು ಎಂದು ಸೂಚಿಸಿದ್ದಾರೆ.
ಮಹಾರಾಷ್ಟ ಡ್ಯಾಂಗಳಿಂದ ಬರುವ ನೀರು ಕಡಿಮೆಯಾಗಿದ್ದರಿಂದ ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಭೀತಿಯಿಲ್ಲ. ಹೀಗಾಗಿ ಜನರು ಆತಂಕ ಪಡಬೇಕಾಗಿಲ್ಲ ಜನರ ರಕ್ಷಣೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ಮಹಾರಾಷ್ಟ್ರ ದ ಸಚಿವರೊಂದಿಗೆ ತಾವು ಸಹ ಕರೆ ಮಾಡಿ ಮಾತನಾಡಿದ್ದು, ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವುದಿಲ್ಲ ಎಂದು ನಿರಾಣಿ ಹೇಳಿದ್ದಾರೆ.
PublicNext
12/09/2022 06:22 pm