ಕಲಬುರಗಿ: ಅಸಂಘಟಿತ ವಲಯದ ಕಾರ್ಮಿಕ ವರ್ಗವು ವಿವಿಧ ಸೌಲಭ್ಯಗಳನ್ನು ಪಡೆಯಲು ಇ-ಶ್ರಮ್ ಕಾರ್ಡ್ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 3.48 ಲಕ್ಷ ಅಸಂಘಟಿಕ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಿಸಲಾಗಿದೆ ಎಂದು ಕಾರ್ಮಿಕ ಇಲಾಖೆಯ ಉಪ ಆಯುಕ್ತ ಡಿ.ಜಿ.ನಾಗೇಶ ಹೇಳಿದರು.
ಕಾರ್ಮಿಕ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಗುರುವಾರ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ ಮಾಧ್ಯಮ ಕ್ಷೇತ್ರದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ ಮತ್ತು ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿಂಚಣಿ) ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಪತ್ರಿಕೆ ಮಾರಾಟಗಾರರು, ಮನೆ ಕೆಲಸಗಾರರು, ಕೂಲಿ ಕಾರ್ಮಿಕರು, ಟೈಲರ್‍ಗಳು, ಚಿಂದಿ ಆಯುವವರು, ಬೀದಿ ವ್ಯಾಪಾರಿಗಳು ಹೀಗೆ ಪಿ.ಎಫ್, ಇ.ಎಸ್.ಐ. ಸೌಲಭ್ಯ ಇಲ್ಲದ ಮತ್ತು ಆದಾಯ ತೆರಿಗೆ ಪಾವತಿ ಮಾಡದ ವಿವಿಧ ವೃತ್ತಿಯಲ್ಲಿ ತೊಡಗಿರುವ 16 ರಿಂದ 59 ವರ್ಷದೊಳಗಿನ ಕಾರ್ಮಿಕ ವೃಂದ ಈ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಕಾರ್ಡ್ ಪಡೆದ ಫಲಾನುಭವಿಗೆ ಒಂದು ವರ್ಷದ ನಂತರ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮೆ ಸೌಲಭ್ಯ ದೊರಕಲಿದೆ. ಇದಲ್ಲದೆ ಆಕಸ್ಮಿಕ ಸಾವು ಮತ್ತು ರಸ್ತೆ ಅಪಘಾತದಲ್ಲಿ ಸಂಪೂರ್ಣ ಅಂಗವೈಕಲ್ಯತೆ ಹೊಂದಿದಲ್ಲಿ 2 ಲಕ್ಷ ರೂ., ಭಾಗಶ: ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ ಸಹ ಸಿಗಲಿದೆ ಎಂದು ಯೋಜನೆ ಕುರಿತು ಮಾಹಿತಿ ನೀಡಿದರು.
ಇ-ಶ್ರಮ್ ಕಾರ್ಡ್ ಪಡೆದವರನ್ನು ಕೇಂದ್ರ ಸರ್ಕಾರವು ಪಿ.ಎಂ-ಅವಾಸ್, ಕಿಸಾನ್ ಕಾರ್ಡ್‍ದಂತಹ ಯೋಜನೆಗಳಿಗೆ ಲಿಂಕ್ ಮಾಡಲು ಚಿಂತನೆ ನಡೆಸಿದೆ. ಹೀಗಾಗಿ ಅರ್ಹರೆಲ್ಲರು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಸೇವೆ ಕೊಂಡಾಡಿದ ಅವರು, ಅಂತಹ ಆರೋಗ್ಯ ತುರ್ತು ಪರಿಸ್ಥಿಯ ಸಂದರ್ಭದಲ್ಲಿಯೂ ಮಾಧ್ಯಮ ಕ್ಷೇತ್ರದಲ್ಲಿನ ಕಾರ್ಮಿಕರ ಸೇವೆ ಶ್ಲಾಘನೀಯ ಎಂದರು.
ದೇಶದ ಒಟ್ಟು ಕಾರ್ಮಿಕ ವರ್ಗದ ಪೈಕಿ ಶೇ.90ರಷ್ಟು ಅಸಂಘಟಿಕ ಕಾರ್ಮಿಕರಿದ್ದಾರೆ. ಕೋವಿಡ್ ಕಾಲದಲ್ಲಿ ಸಂಕಷ್ಟ ಪಟ್ಟ ಈ ವರ್ಗದವರನ್ನು ಗುರಿಯಾಗಿಸಿಯೇ ಈ ವರ್ಗದ ದತ್ತಾಂಶ ಪಡೆದು ಸಕಾಲದಲ್ಲಿ ಸಹಾಯದ ಹಸ್ತ ಚಾಚಲು ಕೇಂದ್ರ ಸರ್ಕಾರವು ಈ ಯೋಜನೆ ಜಾರಿಗೊಳಿಸಿದೆ. ಪ್ರಸ್ತುತ ದೇಶದಲ್ಲಿ ಈ ಯೋಜನೆಯಡಿ 38 ಕೋಟಿ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ನೀಡುವ ಗುರಿ ಹೊಂದಿ ಇದೂವರೆಗೆ 28 ಕೋಟಿ ಕಾರ್ಡ್ ವಿತರಿಸಿದೆ. ಇನ್ನು ರಾಜ್ಯದಲ್ಲಿ 1.83 ಕೋಟಿ ಗುರಿ ಪೈಕಿ 70 ಲಕ್ಷ ಕಾರ್ಮಿಕರಿಗೆ ಕಾರ್ಡ್ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ 7.94 ಲಕ್ಷ ಗುರಿ ಪೈಕಿ ಇದೂವರೆಗೆ 3.48 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಿಸಿದೆ ಎಂದರು.
PublicNext
13/10/2022 05:00 pm