ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಮಿಲಿಟರಿ ಮದ್ಯ ಮಾರಾಟ ದಂಧೆ ಹೆಚ್ಚಾಗಿದೆ. ಮಿಲಿಟರಿ ಸಿಬ್ಬಂದಿಗೆ ಮೀಸಲಾದ ಮದ್ಯವನ್ನು ಕಳ್ಳಮಾರ್ಗದಲ್ಲಿ ತಂದು ಹೆಚ್ಚಿನ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಕೆಲ ಮದ್ಯದಗಂಡಿ ಮಾಲೀಕರು ದಂಧೆಕೋರರ ಜತೆ ಶಾಮೀಲಾಗಿ ಈ ಅಕ್ರಮದಲ್ಲಿ ಭಾಗಿಯಾಗಿರುವುದೂ ಪತ್ತೆಯಾಗಿದೆ.
ಒಂದೂವರೆ ವರ್ಷದಲ್ಲಿ ರಾಜ್ಯಾದ್ಯಂತ 800 ಲೀ.ಮಿಲಿಟರಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಮಂಡ್ಯದಲ್ಲಿ ಹೆಚ್ಚು ಮದ್ಯ ಜಪ್ತಿ ಮಾಡಲಾಗಿದೆ. ಅಲ್ಲದೆ, ಕಡಿಮೆ ಮೊತ್ತದ ಮದ್ಯವನ್ನು ಬ್ರ್ಯಾಂಡೆಡ್ ಬಾಟಲಿಗೆ ತುಂಬಿ ಮಿಲಿಟರಿ ಮದ್ಯ ಹೆಸರಲ್ಲಿ ಸೇಲ್ ಮಾಡಿ ಹಣ ಮಾಡುವ ವೃತ್ತಿಯಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. 2021ರ ಜು.1ರಿಂದ 2022ರ ಜೂ.30ರ ವರೆಗೆ 910 ಲೀ.ನಕಲಿ ಮದ್ಯವನ್ನು ಕಾರ್ಯಾಚರಣೆ ವೇಳೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ನಿವೃತ್ತ ಮಿಲಿಟರಿ ಸೈನಿಕರಿಗೆ 4, ವೃತ್ತಿಯಲ್ಲಿ ಇರುವ ಸೈನಿಕರಿಗೆ 5 ಹಾಗೂ ಕರ್ನಲ್, ಕಮಾಂಡರ್ ಸೇರಿ ಇತರೆ ರ್ಯಾಂಕಿಂಗ್ ಆಧಾರಿತ ಅಧಿಕಾರಿಗಳಿಗೆ ತಿಂಗಳಿಗೆ ಇಂತಿಷ್ಟು ಮದ್ಯವನ್ನು ರಕ್ಷಣಾ ಇಲಾಖೆ ನಿಗದಿಪಡಿಸಿದೆ. ಕ್ಯಾಂಟೀನ್ ಸ್ಟೋರ್ಡಿ ಪಾರ್ಟ್‌ಮೆಂಟ್ (ಸಿಎಸ್‌ಡಿ) ನಲ್ಲಿ ಇವರಿಗೆ ಬ್ರ್ಯಾಂಡ್‌ಡ್ ಮದ್ಯದ ಮೇಲೆ ಶೇ. 60ವರೆಗೆ ಡಿಸ್ಕೌಂಡ್ ಸಿಗಲಿದೆ.
ಮಿಲಿಟರಿ ಸಿಬ್ಬಂದಿ ತಮ್ಮ ಗುರುತಿನ ಚೀಟಿ ತೋರಿಸುವ ಮೂಲಕ ರಿಯಾಯಿತಿ ದರದಲ್ಲಿ ಡಿಫೆನ್ಸ್ ಮದ್ಯ ಖರೀದಿಸಲು ಅವಕಾಶವಿದೆ. ಕೆಲವರು ಮದ್ಯ ಸೇವನೆ ಮಾಡದವರು ಅಥವಾ ಸೇವಿಸುವವರೂ ಇರುತ್ತಾರೆ. ಮದ್ಯ ಸೇವನೆ ಮಾಡದವರೂ ಮದ್ಯ ಖರೀದಿಸಿ ಬೇರೆಯವರಿಗೆ ನೀಡುತ್ತಾರೆ. ಇಂಥವರು ಡಿಫೆನ್ಸ್ ಮದ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಸಿಎಸ್‌ಡಿಯಲ್ಲಿ 10 ಸಾವಿರ ರೂ.ಮೌಲ್ಯದ ಡಿಫೆನ್ಸ್ ಮದ್ಯದ ಬಾಟಲಿಗೆ 4 ಸಾವಿರ ರೂ.ಗೆ ಮಿಲಿಟರಿ ಸಿಬ್ಬಂದಿ ನೀಡಲಾಗುತ್ತದೆ. ಅದೇ ಬಾಟಲ್ ಅನ್ನು ಹೊರಗಡೆ ತಂದು ಜನರಿಗೆ 5-7 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ನಗರದಲ್ಲಿ ನಡೆಯುತ್ತಿದ್ದ ಈ ದಂಧೆ ಗ್ರಾಮೀಣ ಭಾಗದ ಸಣ್ಣಪುಟ್ಟ ಅಂಗಡಿಗಳಿಗೂ ಹಬ್ಬಿದೆ.
ಮುಂಬೈ ಸೇರಿ ಇತರೆ ನಗರಗಳಲ್ಲಿ 300 ರೂ.ಗೆ ಸಿಗುವ ಪುಲ್ ಬಾಟಲ್ ಚೀಪ್ ಲಿಕ್ಕರ್ ಅನ್ನು ತಂದು ದುಬಾರಿ ಬೆಲೆಯ ಖಾಲಿ ಬಾಟಲ್‌ಗಳಿಗೆ ಮಿಶ್ರಣ ಮಾಡುತ್ತಾರೆ. ಅಂಗಡಿಗೆ ಬರುವ ಗ್ರಾಹಕರಿಗೆ ಬ್ರ್ಯಾಂಡೆಡ್ ಮದ್ಯವೆಂದು ನಂಬಿಸಿ ಕೊಡುತ್ತಾರೆ.
ಕರ್ನಾಟಕದಲ್ಲಿ ಮಾರಾಟಕ್ಕೆ ಅನುಮತಿ ಇಲ್ಲದ 34,725 ಲೀ.ಮದ್ಯ ವಶಕ್ಕೆ ಪಡೆಯಲಾಗಿದೆ. ಗೋವಾ ಸೇರಿ ಇತರೆ ರಾಜ್ಯಗಳ ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಆದರೂ, ಅಂತಾರಾಜ್ಯ ಜಾಲ ಹೊರ ರಾಜ್ಯಗಳ ಮದ್ಯವನ್ನು ರಾಜ್ಯಕ್ಕೆ ಅಡ್ಡದಾರಿಯಲ್ಲಿ ಸಾಗಿಸುತ್ತಿದೆ. ಸರ್ಕಾರದ ಖಜಾನೆಯ ಪ್ರಮುಖ ಸಂಪನ್ಮೂಲವಾಗಿರುವ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಒಂದಿಲ್ಲೊಂದು ಅಕ್ರಮಗಳಿಗೆ ಕಡಿವಾಣವೇ ಬೀಳುತ್ತಿಲ್ಲ.
PublicNext
12/10/2022 03:09 pm