ನವದೆಹಲಿ: ಕೇಂದ್ರ ಸರ್ಕಾರವು ಚಾಲನಾ ಪರವಾನಗಿ ನೀಡುವ ನಿಯಮಗಳನ್ನು ಬದಲಾಯಿಸಿದ್ದು, ಡಿಎಲ್ ಪ್ರಕ್ರಿಯೆಯನ್ನು ಬಹಳ ಸುಲಭವಾಗಿಸಿದೆ. ಈ ಮೂಲಕ ಇನ್ಮುಂದೆ ನೀವು ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ.
ಹೊಸ ನಿಯಮದ ಪ್ರಕಾರ, ಈಗ ನೀವು ಆರ್‌ಟಿಓ ಕಚೇರಿಗೆ ಭೇಟಿ ನೀಡಿ ಯಾವುದೇ ರೀತಿಯ ಚಾಲನಾ ಪರೀಕ್ಷೆಯನ್ನು ನೀಡುವ ಅಗತ್ಯವಿಲ್ಲ. ಈ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸೂಚಿಸಿದೆ. ಈ ನಿಯಮಗಳು ಈ ತಿಂಗಳಿನಿಂದ ಜಾರಿಗೆ ಬಂದಿವೆ.
ಯಾವುದೇ ಮಾನ್ಯತೆ ಪಡೆದ ಚಾಲನಾ ತರಬೇತಿ ಶಾಲೆಯಲ್ಲಿ ಚಾಲನಾ ಪರವಾನಗಿಗಾಗಿ ಅರ್ಜಿದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಚಾಲನಾ ತರಬೇತಿ ಶಾಲೆಯಿಂದ ತರಬೇತಿ ಪಡೆದು ಅಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸಚಿವಾಲಯ ಹೇಳಿದೆ. ಅರ್ಜಿದಾರರಿಗೆ ಶಾಲೆಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ, ಅರ್ಜಿದಾರರ ಚಾಲನಾ ಪರವಾನಗಿಯನ್ನು ನೀಡಲಾಗುವುದು ಎಂದು ಹೇಳಲಾಗಿದೆ.
ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಕೆಲವು ಮಾರ್ಗಸೂಚಿಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಇವು ತರಬೇತಿ ಕೇಂದ್ರಗಳ ಪ್ರದೇಶದಿಂದ ತರಬೇತುದಾರನ ಶಿಕ್ಷಣದವರೆಗೆ ಎಲ್ಲಾ ಅಂಶಗಳನ್ನು ಒಳಗೊಂಡಿವೆ.
* ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರುವ ಕುರಿತು ಅಧಿಕೃತ ಏಜೆನ್ಸಿ ಖಚಿತಪಡಿಸಬೇಕು. ಈ ಕಟ್ಟಳೆ ಮಧ್ಯಮ ಮತ್ತು ಭಾರೀ ಪ್ರಯಾಣಿಕ, ಸರಕು ವಾಹನಗಳು ಅಥವಾ ಟ್ರೇಲರ್‌ಗಳ ಕೇಂದ್ರಗಳಿಗೆ ಎರಡು ಎಕರೆ ಭೂಮಿ ನಿಗದಿಪಡಿಸಲಾಗಿದೆ.
* ತರಬೇತುದಾರ ಕನಿಷ್ಠ ಅಂದರೆ 12ನೇ ತರಗತಿ ಪಾಸಾಗಿರಬೇಕು. ಆತನಿಗೆ ಕನಿಷ್ಠ ಅಂದರೆ 5 ವರ್ಷಗಳ ಡ್ರೈವಿಂಗ್ ಅನುಭವ ಇರಬೇಕು. ಸಾರಿಗೆ ನಿಯಮಗಳ ಕುರಿತು ಆತ ಚೆನ್ನಾಗಿ ಅರಿತಿರಬೇಕು.
* ಇದಕ್ಕಾಗಿ ಸಚಿವಾಲಯ ಒಂದು ಸಿಲೆಬಸ್ ಕೂಡ ನಿಗದಿಪಡಿಸಿದೆ. ಲಘುವಾಹನ ಚಾಲನೆಗಾಗಿ ಇರುವ ಸಿಲೆಬಸ್ ಅವಧಿ ಗರಿಷ್ಟ 4 ವಾರಗಳದ್ದಾಗಿದ್ದು, ಇದು 29 ಗಂಟೆ ನಡೆಯಲಿದೆ. ಈ ಡ್ರೈವಿಂಗ್ ಸೆಂಟರ್ ಗಳ ಸಿಲೆಬಸ್ ಅನ್ನು 2 ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಇದರಲ್ಲಿ ಥಿಯರಿ ಹಾಗೂ ಪ್ರ್ಯಾಕ್ಟಿಕಲ್ ಒಳಗೊಂಡಿವೆ.
* ಜನರಿಗೆ ಮೂಲಭೂತ ರಸ್ತೆಗಳು, ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿ, ನಗರ ರಸ್ತೆಗಳು, ರಿವರ್ಸಿಂಗ್, ಪಾರ್ಕಿಂಗ್, ಎತ್ತರದ ಹಾಗೂ ಇಳಿಜಾರು ಡ್ರೈವಿಂಗ್ ಕುರಿತು ತರಬೇತಿ ನೀಡಲು 21ಗಂಟೆ ವ್ಯಯಿಸಬೇಕು. ಉಳಿದ 8 ಗಂಟೆಗಳು ಥಿಯರಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆಯ ಶಿಷ್ಟಾಚಾರ ತಿಳಿಯುವುದು, ರೋಡ್ ರೇಜ್, ಟ್ರಾಫಿಕ್ ಮಾಹಿತಿ, ದುರ್ಘಟನೆಯ ಕಾರಣಗಳನ್ನು ಅರಿಯುವುದು. ಪ್ರಾಥಮಿಕ ಚಿಕಿತ್ಸೆ ಹಾಗೂ ಡ್ರೈವಿಂಗ್ ಇಂಧನದ ದಕ್ಷತೆಯ ಕುರಿತು ಅರಿವು ಮೂಡಿಸಬೇಕು.
PublicNext
11/09/2021 10:32 pm