ನವದೆಹಲಿ: ಗಗನಕ್ಕೇರುತ್ತಿರುವ ಅಡುಗೆ ಎಣ್ಣೆ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪಾಮ್ ಆಯಿಲ್, ಸೋಯಾ ಆಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸರ್ಕಾರವು ಕಡಿತಗೊಳಿಸಿದ್ದು, ಖಾದ್ಯ ತೈಲ ಬೆಲೆಗಳ ಬೆಲೆ ಕಡಿಮೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಈ ಮಾಹಿತಿ ನೀಡಿದೆ. ಹೀಗೆ ಸೀಮಾಸುಂಕ ಕಡಿತದಿಂದ ಸರ್ಕಾರಕ್ಕೆ 1,100 ಕೋಟಿ ರೂ. ಆದಾಯ ಖೋತಾ ಆಗಲಿದೆ ಎಂಬುದನ್ನೂ ಹೇಳಿದೆ. ಈ ಮೂರೂ ಖಾದ್ಯತೈಲಗಳಿಗೆ ಸಂಬಂಧಿಸಿದಂತೆ ಕ್ರೂಡ್ ಮತ್ತು ರಿಫೈನ್ಡ್ ಎರಡೂ ವಿಭಾಗದಲ್ಲಿ ಸೀಮಾಸುಂಕ ಕಡಿತಗೊಳಿಸಲಾಗಿದೆ. ಆದರೆ ಕಚ್ಚಾ ತಾಳೆ ಎಣ್ಣೆ ಮೇಲಿನ ಅಗ್ರಿ-ಸೆಸ್ ಶೇ. 17.5ರಿಂದ ಶೇ. 20ಕ್ಕೆ ಏರಿಸಲಾಗಿದೆ ಎಂದೂ ಇಲಾಖೆ ತಿಳಿಸಿದೆ.
ಕಸ್ಟಮ್ ಸುಂಕ ಇಳಿಕೆಯೊಂದಿಗೆ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಯಿಲ್, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ. 24.75ರಷ್ಟು ಇಳಿಕೆಯಾಗಲಿದೆ. ಆದರೆ ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾಯಿಲ್ ಹಾಗೂ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆ ಶೇ.35.75ರಷ್ಟಾಗಲಿದೆ. ಚಿಲ್ಲರೆ ಬೆಲೆಯಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯಲ್ಲಿ 4 - 5 ರೂಪಾಯಿಗಳಷ್ಟು ಕಡಿಮೆಯಾಗಬಹುದು. ಸರ್ಕಾರವು ಸಾಸಿವೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ತಗ್ಗಿಸಬೇಕು ಎಂದು ದ್ರಾವಕ ಹೊರ ತೆಗೆಯುವವರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಬಿವಿ ಮೆಹ್ತಾ ತಿಳಿಸಿದ್ದಾರೆ.
PublicNext
11/09/2021 10:00 pm