ಚಿತ್ರದುರ್ಗ: ಆಗಸ್ಟ್ 15 ಬಂತೆಂದರೆ ದೇಶದೆಲ್ಲೆಡೆ ಹಬ್ಬದ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗುತ್ತದೆ. ದೇಶದ ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಮತ್ತಿತರ ಕಡೆಗಳಲ್ಲಿ ರಂಗು ರಂಗಿನ ಬೆಳಕಿನ ಮಧ್ಯೆ ತ್ರಿವರ್ಣ ಧ್ವಜ ಹಾರಾಟ ಕಣ್ಮನ ಸೆಳೆಯುತ್ತದೆ. ಅಂದಹಾಗೆ 1947 ಕ್ಕಿಂತ ಮೊದಲು ಪರಕೀಯರ ಕೈಯಲ್ಲಿದ್ದ ದೇಶದ ಆಡಳಿತವನ್ನು ವಾಪಸ್ ಪಡೆಯಲು ದೇಶ, ರಾಜ್ಯ ಮತ್ತು ಜಿಲ್ಲೆಯಲ್ಲಿ ಸಾಕಷ್ಟು ರೀತಿಯಲ್ಲಿ ಚಳುವಳಿಗಳು ನಡೆದವು. ಅಂತಹ ಚಳುವಳಿಗಳಲ್ಲಿ ಜಿಲ್ಲೆಯಲ್ಲೇ ಮೊದಲ ಭಾರಿಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಗ್ರಾಮವೇ ತುರುವನೂರು. ಗ್ರಾಮದ ಕಿಚ್ಚು ತಿಳಿಯಲು ಈ ಸ್ಟೋರಿ ಓದಿ..
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮ ಸ್ವಾತಂತ್ರ್ಯ ಹೋರಾಟಗಾರ ತವರುರಾಗಿದೆ ಎಂದರೇ ತಪ್ಪಾಗಲಾರದು. ಜೊತೆಗೆ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಒಳಗೊಂಡ ಜಿಲ್ಲೆಯ ಏಕೈಕ ಗ್ರಾಮ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮದಲ್ಲಿ ಮೊಟ್ಟ ಮೊದಲು ಸ್ವಾತಂತ್ರ ಹೋರಾಟದ ಕಿಚ್ಚು ಪ್ರಾರಂಭವಾಯಿತು. ಇದರ ಸವಿನೆನಪಿಗಾಗಿ ಗ್ರಾಮದಲ್ಲಿ ಆಳೆತ್ತರದ ಕಂಚಿನ ಗಾಂಧೀಜಿಯ ಪ್ರತಿಮೆ ದೇವಾಲಯ ನಿರ್ಮಿಸಿ ನಿತ್ಯ ಪೂಜಾ ಕೈಂಕರ್ಯ ಮಾಡಲಾಗುತ್ತಿದೆ. ದೆಹಲಿಯಲ್ಲಿ ಏಳು ಅಡಿ ಎತ್ತರದ ಗಾಂಧಿ ಪ್ರತಿಮೆ ಬಿಟ್ಟರೆ ದೇಶದ ಎರಡನೆಯದು ತುರುವನೂರು ಗಾಂಧಿ ಪ್ರತಿಮೆ ಎಂದರೆ ತಪ್ಪಾಗಲಾರದು.
ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಜಿಲ್ಲೆಯವರೇ ಆದ ಆಗಿನ ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ನವರು ಗ್ರಾಮದಲ್ಲಿ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಿದರು. ಈ ದೇಗುಲವನ್ನು ಅಕ್ಟೋಬರ್ 1-1968 ರಂದು ಎಸ್.ನಿಜಲಿಂಗಪ್ಪನವರು ಉದ್ಘಾಟಿಸಿದ್ದರು. ಈ ಗಾಂಧಿ ಪ್ರತಿಮೆಯ ದೇವಸ್ಥಾನದಲ್ಲಿ ದಿನನಿತ್ಯ ಪೂಜೆ ಪುನಸ್ಕಾರ ನಡೆಯುತ್ತಲಿವೆ.
ಯೋಧರಿಗೆ ಮಾಸಾಶನ : ಸ್ವಾತಂತ್ರ್ಯ ನಂತರ ರಾಜ್ಯ ಸರ್ಕಾರ ಇಲ್ಲಿನ 136 ಜನರಿಗೆ ಸ್ವಾತಂತ್ರ್ಯ ಯೋಧರ ಮಾಸಾಶನ ಮಂಜೂರು ಮಾಡಿತು. ತದನಂತರದ ದಿನಗಳಲ್ಲಿ ಬಹುತೇಕ ಯೋಧರು ನಿಧನರಾಗಿದ್ದಾರೆ. ಚಳುವಳಿಯ ಸಮಯದಲ್ಲಿ ಗ್ರಾಮದ ನೂರಾರು ಜನರು ಆಂಗ್ಲರ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. ಈಗ ಸ್ವಾತಂತ್ರ ಯೋಧರ ಪತ್ನಿ ಹಾಗೂ ಆಶ್ರಿತರು ಕೇಂದ್ರ ರಾಜ್ಯ ಸರ್ಕಾರಗಳ ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ನಾಲ್ಕು ಜನರಿಗೆ ಹಾಗೂ ರಾಜ್ಯ ಸರ್ಕಾರ 13 ಜನರಿಗೆ ಸ್ವಾತಂತ್ರ್ಯಯೋಧರಿಗೆ ಮಾಸಾಶನ ನೀಡುತ್ತಿದೆ.
ಒಟ್ಟಾರೆಯಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಪಡೆದ ಜಿಲ್ಲೆಯ ಮೊದಲ ಗ್ರಾಮ ಎಂಬ ಹೆಸರಿಗೆ ಹೆಗ್ಗಳಿಕೆಗೆ ಪಾತ್ರವಾಗಿರುವ ತುರುವನೂರು ಗ್ರಾಮದಲ್ಲಿ ಹೋರಾಟದ ನೆನಪಿಗಾಗಿ ಕಲ್ಲಿನ ಕೋಟೆಯಂಥ ಕಟ್ಟಡದ ಮೇಲೆ ನಿರ್ಮಿಸಿರುವ ಕಂಚಿನ ಗಾಂಧಿ ಪ್ರತಿಮೆ ಎಲ್ಲರ ಕಣ್ಮನ ಸೆಳೆಯುತ್ತದೆ.
PublicNext
15/08/2021 09:47 am