ನವದೆಹಲಿ: ಭಾರತೀಯ ವಾಯುಪಡೆಗೆ ಫ್ರಾನ್ಸ್ ನಿಂದ ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳು ಬಂದು ತಲುಪಿವೆ.
ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ತಡೆ ರಹಿತ ಹಾರಾಟದೊಂದಿಗೆ ಭಾರತ ಪ್ರವೇಶಿಸಿರುವುದಾಗಿ ಭಾರತೀಯ ವಾಯುಪಡೆ ಹೇಳಿದೆ.
ಫ್ರಾನ್ಸ್ ನಿಂದ ಹಾರಾಟ ಆರಂಭಿಸಿದ ಮೂರು ರಫೇಲ್ ಯುದ್ಧ ವಿಮಾನಗಳಿಗೆ ಮಾರ್ಗ ಮಧ್ಯೆ ಮೂರು ಬಾರಿ ಇಂಧನ ಭರ್ತಿ ಮಾಡಲಾಗಿದೆ.
8 ಗಂಟೆ ನಿರಂತರ ಹಾರಾಟ ನಡೆಸಿರುವ ರಫೇಲ್, ದೂರ ವ್ಯಾಪ್ತಿಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
ಗುಜರಾತ್ ನ ಜಾಮ್ ನಗರ್ ವಾಯುನೆಲೆಗೆ ಮೂರು ರಫೇಲ್ ಗಳು ಬಂದಿಳಿಯುವ ಮೂಲಕ ದೇಶದ ವಾಯುಪಡೆಗೆ ಒಟ್ಟು 8 ರಫೇಲ್ ಗಳ ಸೇರ್ಪಡೆಯಾದಂತಾಗಿದೆ.
₹59,000 ಕೋಟಿ ವೆಚ್ಚದಲ್ಲಿ 36 ರಫೇಲ್ ಗಳನ್ನು ಸಿದ್ಧಪಡಿಸಿಕೊಡುವಂತೆ ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಂಡಿದೆ.
2023ರ ವೇಳೆ ಎಲ್ಲ 36 ರಫೇಲ್ ಯುದ್ಧ ವಿಮಾನಗಳು ವಾಯುಪಡೆಗೆ ನಿಯೋಜನೆಗೊಳ್ಳಲಿವೆ ಎಂದು ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಅಕ್ಟೋಬರ್ 5ರಂದು ಹೇಳಿದ್ದರು.
PublicNext
05/11/2020 08:48 am