ಪುತ್ತೂರು: ಅಡಿಕೆ ನಿಷೇಧವೆಂಬ ತೂಗುಗತ್ತಿ ಮತ್ತೆ ಅಡಿಕೆ ಬೆಳೆಗಾರರನ್ನು ಕಾಡಲಾರಂಭಿಸಿದೆ. ಜಾರ್ಖಂಡ್ ಸಂಸದ ನಿಶಿಕಾಂತ್ ಅಡಿಕೆಯಲ್ಲಿ ವಿಷಕಾರಿ ಅಂಶವಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದು ಅಡಿಕೆ ಬೆಳೆಗಾರರನ್ನು ಆತಂಕ, ಗೊಂದಲಕ್ಕೀಡು ಮಾಡಿದೆ.
ಪ್ರತಿ ಬಾರಿಯೂ ಅಡಿಕೆ ನಿಷೇಧ ಎಂಬ ಗುಮ್ಮ ಅಡಿಕೆ ಬೆಳೆಗಾರರನ್ನು ಸತಾಯಿಸುತ್ತಿದ್ದು, ಇದಕ್ಕೆ ಶಾಶ್ವತ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಅಡಿಕೆ ಬೆಳೆಯಿಂದ ಹಿಡಿದು, ಅಡಿಕೆ ಸಂಸ್ಕರಿಸುವ ಹಂತದಲ್ಲೂ ಅಡಿಕೆಗೆ ರಾಸಾಯನಿಕ ಬಳಸುತ್ತಿರುವುದು ಇದೀಗ ತೆರೆದಿಟ್ಟ ಪುಸ್ತಕದಂತೆ ಸತ್ಯ ಎನ್ನುವ ವಿಚಾರವೂ ಹರಿದಾಡುತ್ತಿದೆ. ಅಡಿಕೆ ಮರದಲ್ಲಿ ಹಿಂಗಾರ ಉದುರಿ ಬೀಳದಂತೆ ಮೈಲುತುತ್ತು (ಕಾಫರ್ ಸಲ್ಫೇಟ್ ) ಸೇರಿದಂತೆ ವಿವಿಧ ರಾಸಾಯನಿಕಗಳನ್ನು ಅಡಿಕೆಗೆ ಬೆಳೆಯುವ ಮೊದಲೇ ಬಿಡಲಾಗುತ್ತದೆ. ಅಡಿಕೆಯನ್ನು ಮಾರಾಟ ಮಾಡುವ ಹಂತದಲ್ಲಿ ಅಡಿಕೆಯನ್ನು ಸಂಸ್ಕರಿಸುವ ಗಾರ್ಬಲ್ ಗಳಲ್ಲಿ ಅಡಿಕೆ ಪಾಲಿಶ್ ಮಾಡುವುದಕ್ಕಾಗಿ ಸಲ್ಫರ್ ಬಳಸಲಾಗುತ್ತದೆ. ಅಲ್ಲದೆ, ಅಡಿಕೆ ಶೇಖರಿಸಿಡುವ ಸಂದರ್ಭ ಅಡಿಕೆಗೆ ಹುಳ ಕಾಟ ತಡೆಯಲು ಇನ್ನೊಂದು ರೀತಿಯ ರಾಸಾಯನಿಕ ಬಳಸಲಾಗುತ್ತಿದೆ. ಆ ಬಳಿಕ ಅಡಿಕೆಯನ್ನು ಗುಟ್ಕಾ ಆಗಿ ಪರಿವರ್ತಿಸುವ ಸಂದರ್ಭದಲ್ಲೂ ಅಡಿಕೆಗೆ ರಾಸಾಯನಿಕ ಮಿಕ್ಸ್ ಮಾಡಲಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲ್ಮುಡ.
PublicNext
15/11/2021 08:26 am