ಬೆಂಗಳೂರು: ಹೇಳಿದ ಕೆಲಸ ಮಾಡದಿರುವ ಸರ್ಕಾರದ ಮೇಲೆ ಹೈಕೋರ್ಟ್ ಗರಂ ಆಗಿದೆ.
ಹೌದು ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಟಾಕಿಂಗ್ ಲ್ಯಾಪ್ ಟಾಪ್ ವಿತರಿಸದಿರುವ ಕುರಿತ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಾದ ಆಲಿಸಿ ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿತು.
ಅರ್ಜಿದಾರರು ಸ್ವತಃ ವಾದ ಮಂಡಿಸಿ, ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲು 2018ರ ಜು. 3ರಂದು ಉಚಿತ ಟಾಕಿಂಗ್ ಲ್ಯಾಪ್ ಟಾಪ್ ವಿತರಣೆ ಯೋಜನೆಯನ್ನು ಜಾರಿಗೆ ತರಲಾಯಿತು.
ಅದರಂತೆ 2018ರಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಆದರೆ ಕಳೆದೆರಡು ಶೈಕ್ಷಣಿಕ ವರ್ಷದಲ್ಲಿ ಲ್ಯಾಪ್ಟಾಪ್ ನೀಡಿಲ್ಲ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಲ್ಯಾಪ್ ಟಾಪ್ ವಿತರಿಸುವ ಪ್ರಕ್ರಿಯೆಗೆ ಈವರೆಗೆ ಚಾಲನೆ ಸಿಕ್ಕಿಲ್ಲ ಎಂದರು.
ಅಲ್ಲದೆ, ಯೋಜನೆ ಘೋಷಣೆಯಾದ ನಂತರ ವರ್ಷದಿಂದ ವರ್ಷಕ್ಕೆ ಸರಕಾರ ಅನುದಾನವನ್ನು ಕಡಿತಗೊಳಿಸುತ್ತಾ ಬಂದಿದೆ.
ಹಾಗಾಗಿ ಆ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ನ್ಯಾಯಪೀಠವನ್ನು ಕೋರಿದರು.
PublicNext
04/11/2020 07:49 am