ಗದಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ. ಮಾಡಿದ ತಪ್ಪಿಗೆ ಅಂದಾಜು 40 ಲಕ್ಷ ರೂ. ಬಡ್ಡಿ ಸಮೇತ ಅಸಲು ತೀರಿಸಲು ಆದೇಶ ನೀಡಿದೆ. ಹೇಗಪ್ಪಾ ಬಡ್ಡಿ ದುಡ್ಡು ಹೊಂದಿಸೋದಂತ ಪ್ರಾಧಿಕಾರ ತಲೆ ಮೇಲೆ ಕೈಹೊತ್ತು ಕೂತಿದೆ. ಮಾಡಿದ್ದುಣ್ಣೋ ಮಾರಾಯ ಅಂದ್ರೆ ಇದೇ ಇರಬೇಕಲ್ವಾ. ಹಾಗಾದ್ರೆ ಏನಿದು ಪ್ರಕರಣ ಅಂತೀರಾ, ನೋಡಿ ಇಲ್ಲಿ...
ತಲೆ ಮೇಲೆ ಒಂದು ಸೂರು ಇರಲಿ ಅಂತ ನೂರಾರು ಕನಸು ಕಟ್ಟಿಕೊಂಡು ನಗರಾಭಿವೃದ್ಧಿಗೆ 1999 ರಲ್ಲೇ ಸೈಟ್ ಖರೀದಿಗೆ ಬಡಜನ್ರು ವಂತಿಗೆ ಪಾವತಿ ಮಾಡಿದ್ದಾರೆ. 4500 ಜನರು 25 ಲಕ್ಷ ಪಾವತಿ ಮಾಡಿ ಸೈಟ್ ಗಾಗಿ ಕಾದು ಕುಳಿತಿದ್ರು. ಆದ್ರೆ, ಸರ್ಕಾರದಿಂದ ಕ್ರಿಯಾ ಯೋಜನೆ ಅನುಮತಿ ಪಡೆಯದೇ ಜನರಿಂದ ವಂತಿಗೆ ಹಣ ಪಡೆದು ಪ್ರಾಧಿಕಾರ ಯಡವಟ್ಟು ಮಾಡಿಬಿಟ್ಟಿತ್ತು. ಹಾಗಾಗಿ ಪ್ರಾಧಿಕಾರಕ್ಕೆ ಭೂಮಿಯೂ ಮಂಜೂರಾಗದೇ ಜನರಿಗೂ ಸೈಟೂ ಸಿಗದೇ ಪ್ರಕರಣ ಕಗ್ಗಂಟಾಗಿ ಬಿಟ್ಟಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿ 25 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಬಡ್ಡಿ ಸಮೇತ ಅಸಲು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
ವಂತಿಗೆ ಹಣಕ್ಕೆ ವಾರ್ಷಿಕ 8 ಪರ್ಸೆಂಟ್ ಹಾಕಿ ಬಡ್ಡಿ ಸಮೇತ ಹಣ ನೀಡ್ಬೇಕು ಅಥವಾ ಹಣ ಬೇಡ ನಮಗೆ ಸೈಟೇ ಬೇಕು ಎನ್ನೋರಿಗೆ ಪ್ರಾಧಿಕಾರದ ಪ್ರಸಕ್ತ ಯೋಜನೆಯಲ್ಲಿ ಆದ್ಯತೆ ಮೇರೆಗೆ ಸೈಟ್ ನೀಡಬೇಕು ಎಂಬುದು ಆದೇಶದಲ್ಲಿದೆ. ಹೀಗಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೇ ಹೈಕೋರ್ಟ್ ಆದೇಶದಂತೆ ಪ್ರಾಧಿಕಾರ ನಡೆದುಕೊಳ್ಳಬೇಕು ಎಂದು ಲೇಔಟ್ ಹಿತರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದ್ದಾರೆ.
ಲೇಔಟ್ ಅಕ್ರಮಗಳಿಗೆ ಮೊದಲೇ ಗದಗ ಜಿಲ್ಲೆ ಕುಖ್ಯಾತಿ ಪಡೆದಿದೆ. ಈ ಮಧ್ಯೆ ಹೈಕೋರ್ಟ್ ನ ಈ ಆದೇಶ ಪ್ರಾಧಿಕಾರಕ್ಕೆ ಎಚ್ಚರಿಕೆ ಗಂಟೆಯೂ ಹೌದು. ಒಟ್ಟಾರೆ ನೊಂದ ಫಲಾನುಭವಿಗಳಿಗೆ ನ್ಯಾಯ ಸಿಗಲಿ ಅನ್ನೋದು ನಮ್ಮ ಆಶಯ.
PublicNext
29/09/2022 06:43 pm