ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಧೂಳು...ಧೂಳೇ ಎಲ್ಲ!; ಆಡಳಿತ ಡೋಂಟ್‌ ಕೇರ್

ಎಲ್ಲೆಡೆಯೂ ದಸರಾ ಹಬ್ಬದ ಖುಷಿಯಲ್ಲಿ ಜನರಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಅವರಿಗೆ ಮಹಾನವಮಿಯ ಕೊಡುಗೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಜನತೆಗೆ ಉಚಿತವಾಗಿ ತಾಲೂಕು ಆಡಳಿತದಿಂದ, ಲೋಕೋಪಯೋಗಿ ಇಲಾಖೆಯಿಂದ, ಪುರಸಭೆಯಿಂದ ‘ಧೂಳಿನ ಬಂಪರ್ ಗಿಫ್ಟ್ ’ ಖಚಿತವಾಗಿ ಸಿಗುತ್ತಿದೆ.

ಇದೇನಪ್ಪಾ ‘ಧೂಳಿನ ಬಂಪರ್ ಗಿಫ್ಟ್ ’ ಎಂದು ಗಾಬರಿಯಾಗುವ ಅವಶ್ಯಕತೆಯಿಲ್ಲ. ಭಾವೈಕ್ಯತೆಗೆ ಹೆಸರುವಾಸಿ ಆಗಿರುವ ಲಕ್ಷ್ಮೇಶ್ವರ ಪಟ್ಟಣಕ್ಕೆ ದಿನನಿತ್ಯವೂ ಪ್ರವಾಸಿಗರು ಬರುತ್ತಾರೆ. ಆದರೆ, ರಸ್ತೆಗಳಲ್ಲಿ ಕಂಡು ಬರುತ್ತಿರುವ ಧೂಳಿನ ರಾಶಿಗೆ ಪ್ರವಾಸಿಗರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಮ್ಮೆ ಸಂಚರಿಸಿದರೆ ಸಾಕು, ಉಚಿತವಾಗಿ ಮೈಗೆ ಧೂಳು ಅಂಟಿಸಿಕೊಂಡು ಹೋಗುವುದು ಗ್ಯಾರಂಟಿ.

ಪ್ರಮುಖ ರಸ್ತೆಗಳು ಸೇರಿದಂತೆ ಪಟ್ಟಣದ ಯಾವುದೇ ರಸ್ತೆಯಲ್ಲಿ ತೆರಳಿದರೂ ಧೂಳು ಆವರಿಸುತ್ತಿದೆ. ಅದರಲ್ಲೂ ಯಾವುದಾದರೂ ದೊಡ್ಡ ವಾಹನ ಹಾಯ್ದುಹೋದರೆ ಹಿಂದಿರುವ ದ್ವಿಚಕ್ರ ವಾಹನ ಸವಾರರಿಗೆ ದಾರಿ ಕಾಣದಂತೆ ಧೂಳು ತುಂಬಿಕೊಳ್ಳುತ್ತದೆ. ಅನೇಕರು ಧೂಳಿನಿಂದ ರಸ್ತೆ ಕಾಣದೆ ಬಿದ್ದ ಹಾಗೂ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದ ಉದಾಹರಣೆಗಳಿವೆ.

ಹೊಸ ಬಸ್ ನಿಲ್ದಾಣದ ಮುಂದಿನ ಪಾಳಾ - ಬದಾಮಿ ರಾಜ್ಯ ಹೆದ್ದಾರಿ ರಸ್ತೆ, ಬಾನು ಮಾರ್ಕೆಟ್ ರಸ್ತೆ, ಹುಬ್ಬಳ್ಳಿ ರಸ್ತೆ ಸೇರಿದಂತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಧೂಳಿನ ಸಮಸ್ಯೆ ಅಷ್ಟಿಷ್ಟಲ್ಲ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಜನತೆಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು, ಜನರಿಗೆ ಧೂಳಿನಿಂದ ಮುಕ್ತಿಗೊಳಿಸುವರೆ ಕಾದು ನೋಡಬೇಕಾಗಿದೆ.

Edited By :
PublicNext

PublicNext

28/09/2022 02:55 pm

Cinque Terre

23.67 K

Cinque Terre

0