ಗದಗ: ಸೇನೆಯಲ್ಲಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಗ್ರಾಮಸ್ಥರು ಹಾಗೂ ಗೆಳೆಯರ ಬಳಗ ಭರ್ಜರಿ ಸ್ವಾಗತ ಕೋರಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಮಣ್ಣೂರು ಗ್ರಾಮದ ಯೋಧ ಶರಣಪ್ಪ ಖವಾಸ್ತ, ಭಾರತೀಯ ಸೇನೆಯ ಉನ್ನತ ಹುದ್ದೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಮರಳಿದ್ದಾರೆ.
ಈ ಹಿನ್ನೆಲೆ, ಹೊಳೆಯಾಲೂರಿನಿಂದ ಹೊಳೆಮಣ್ಣೂರು ಗ್ರಾಮದವರೆಗೆ ಟ್ರ್ಯಾಕ್ಟರ್ ನಲ್ಲಿ ಯೋಧನ ಕುಟುಂಬವನ್ನ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ವೀರಯೋಧನ ಕುಟುಂಬಕ್ಕೆ ಹೂವಿನ ಸುರಿಮಳೆ ಗೈಯ್ಯಲಾಯಿತು. ಭಾರತ ಮಾತೆಗೆ ಜೈಕಾರ ಹಾಕುತ್ತಾ, ಸುಮಂಗಲೆಯರು ಆರತಿ ಮಾಡಿ ಸಿಹಿ ತಿನ್ನಿಸಿ ಯೋಧನ ಕುಟುಂಬಕ್ಕೆ ಗ್ರಾಮಸ್ಥರೆಲ್ಲರೂ ಅದ್ಧೂರಿ ಸ್ವಾಗತ ಕೋರಿದರು.
ಇನ್ನು ದಾರಿಯುದ್ದಕ್ಕೂ ನಿವೃತ್ತ ಯೋಧರ ಸಂಘದ ನೇತೃತ್ವದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಯೊಬ್ಬ ನಿವೃತ್ತ ಯೋಧರು ತಮ್ಮ ಬೈಕ್ ಗಳಿಗೆ ಭಾರತ ಧ್ವಜ ಕಟ್ಟಿಕೊಂಡು, ಭಾರತ ದೇಶದ ಪರವಾಗಿ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.ನಂತರ ವೇದಿಕೆ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು, ಹಾಗೂ ಗಣ್ಯರು ಭಾಗವಹಿಸಿ, ಯೋಧನ ಕುಟುಂಬಕ್ಕೆ ಸನ್ಮಾನಿಸಿ, ಗೌರವಿಸಿದರು.
PublicNext
04/10/2024 02:17 pm