ಕೋಲಾರ: ಹಿಜಾಬ್ ಬೆನ್ನಲ್ಲೇ ಸರ್ಕಾರಿ ಶಾಲೆಯಲ್ಲಿ ನಮಾಜ್ ಗೆ ಅವಕಾಶ ಕಲ್ಪಿಸಿದ್ದಕ್ಕೆ ಹಿಂದೂ ಕಾರ್ಯಕರ್ತರ ವಿರೋಧ ವ್ಯಕ್ತಪಡಿಸಿದ ಘಟನೆ ಕೋಲಾರದ ಮುಳಬಾಗಿಲುನಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ಮಕ್ಕಳಿಗೆ ನಮಾಜ್ ಮಾಡಲು ಶಾಲೆಯ ಮುಖ್ಯ ಶಿಕ್ಷಕರು ಅವಕಾಶ ಕಲ್ಪಿಸಿ ಕೊಟ್ಟಿದ್ದರು ಇದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶಾಲೆಗೆ ತೆರಳಿದ ಹಿಂದೂ ಸಂಘಟನೆಗಳು ವಿವಾದ ಸೃಷ್ಟಿಸಿದ್ದಾರೆ.
ಮುಳಬಾಗಲು ನಗರದ ಸೋಮೇಶ್ವರ ಪಾಳ್ಯದ ಬಳೆಚಂಗಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ಶುಕ್ರವಾರ ಪ್ರತ್ಯೇಕ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಗೆ ಅವಕಾಶ ಕಲ್ಪಿಸಿ ಕೊಡುವ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ, ಹಿಂದೂಪರ ಸಂಘಟನೆಗಳು, ಹಳೆಯ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂಪರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಸೋಮವಾರ ಪ್ರಾಂಶುಪಾಲರ ತಲೆದಂಡವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ತಹಸೀಲ್ದಾರ್ ಶೋಭಿತಾ ಅವರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದರು.
ಬಿಇಒ ಸೂಚನೆ ಮೇರೆಗೆ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಂಯೋಜಕ ಅಂಜಿತ್ ಕುಮಾರ್ ನೇತೃತ್ವದ ತಂಡವು ಶಾಲೆಯ ಮುಖ್ಯ ಶಿಕ್ಷರು, ಸಹ ಶಿಕ್ಷರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದು, ಬಿಇಒ ಅವರಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
PublicNext
23/01/2022 08:28 am