ಬೆಂಗಳೂರು: ವಾರ್ಷಿಕ ಪರೀಕ್ಷೆ ರೀತಿ ಮಧ್ಯವಾರ್ಷಿಕ ಪರೀಕ್ಷೆ ಆಯೋಜನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ನವೆಂಬರ್ 29 ರಿಂದ ಡಿಸೆಂಬರ್ 10ರವರೆಗೆ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ.
ಈ ಮೊದಲು ಮಧ್ಯ ವಾರ್ಷಿಕ ಪರೀಕ್ಷೆ ಜಿಲ್ಲಾ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿ ಆಗುತ್ತಿತ್ತು. ಕಾಲೇಜು ಮಟ್ಟದಲ್ಲಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿತ್ತು. ಹೀಗಾಗಿ ಜಿಲ್ಲೆಗಳಲ್ಲಿ ಪರೀಕ್ಷಾ ದಿನಾಂಕವೂ ಬೇರೆ ಬೇರೆ ಆಗುತ್ತಿತ್ತು. ಆದರೆ ಈ ಬಾರಿ ಪಿಯು ಬೋರ್ಡ್ ಮಧ್ಯ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಿದೆ. ಮೌಲ್ಯಮಾಪನಕ್ಕೂ ಕೇಂದ್ರಿಕೃತ ವ್ಯವಸ್ಥೆ ಮಾಡಲಾಗಿದೆ. ಸಿಬಿಎಸ್‌ಸಿ, ಐಸಿಎಸ್‌ಇ ಮಧ್ಯ ವಾರ್ಷಿಕ ಪರೀಕ್ಷೆ ಮೊದಲೇ ಮಾಹಿತಿ ನೀಡಿತ್ತು. ಆದರೆ ಪಿಯು ಬೋರ್ಡ್ ದಿಢೀರ್ ಈ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್ ಆರ್ ಅವರು ಮಾಧ್ಯಮಗಳ ಮೂಲಕ ಕೆಲವು ಮಾಹಿತಿ ನೀಡಿದ್ದಾರೆ. ಆದರೆ ಅವರು ಅರ್ಧವಾರ್ಷಿಕ ಪರೀಕ್ಷಾ ಮಾದರಿ ಬದಲಿಸುವುದರ ಹಿಂದೆ ಕೊರೊನಾ ಮೂರನೇ ಅಲೆಯ ಭೀತಿ ಕೆಲಸ ಮಾಡಿದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಕಾಲೇಜುಗಳು ಪಠ್ಯಬೋಧನೆ ಪೂರ್ಣ ಆಗಿಲ್ಲ, ದಾಖಲಾತಿ ಪೂರ್ಣ ಆಗಿಲ್ಲ. ಹೀಗೆ ಬೇರೆ ಬೇರೆ ಕಾರಣಕ್ಕೆ ಅರ್ಧವಾರ್ಷಿಕ ಪರೀಕ್ಷೆ ಮಾಡಬಹುದು ಮಾಡದೆಯೂ ಇರಬಹುದು. ವಿದ್ಯಾರ್ಥಿಗಳೂ ಗಂಭೀರವಾಗಿ ಪರಿಗಣಿಸಲ್ಲ ಈ ಹೀಗಾಗಿ ಈ ತೀರ್ಮಾನ ಎನ್ನುತ್ತಾರೆ. ಆದರೆ ಇಲಾಖೆಯ ಉನ್ನತ ಮೂಲಗಳು ಮಾತ್ರ ವಾರ್ಷಿಕ ಪರೀಕ್ಷೆ ನಡೆಸದಂತಹ ಪರಿಸ್ಥಿತಿಯೇನಾದರೂ ಎದುರಾದರೆ ಆಗ ಈ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲು ಅನುಕೂಲವಾದೀತು ಎಂಬ ದೂರಾಲೋಚನೆಯಿಂದಲೇ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ ಎಂದು ಖಚಿತವಾಗಿ ಹೇಳುತ್ತವೆ.
PublicNext
17/11/2021 06:49 pm