ಕೊರಟಗೆರೆ: ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಸರ್ಕಾರ ಎಷ್ಟೇ ಹೈಟೆಕ್ ಮಾಡಿದರೂ ಸಹ ಪೋಷಕರು ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವುದು ಹೆಚ್ಚು. ಆದರೆ ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಪೋಷಕರ ಮನಸ್ಥಿತಿಯನ್ನು ಬದಲಾಯಿಸಬೇಕು ಎನ್ನುವ ಧ್ಯೇಯದೊಂದಿಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು ಎಂದು ಪೋಷಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗಿದೆ ಇದನ್ನು ಮಾಡಿರುವುದು ಶಿಕ್ಷಣ ಇಲಾಖೆ ಅಲ್ಲ.. ಓರ್ವ ಜನಪ್ರತಿನಿಧಿ ಅದರಲ್ಲೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಎನ್ನುವುದು ವಿಶೇಷ..!
ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಲ್ ಮಲ್ಲಯ್ಯ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಷಕರುಗಳಿಗೆ ಸರ್ಕಾರದ ಸವಲತ್ತುಗಳನ್ನು ಮಕ್ಕಳಿಗೆ ವಿತರಿಸುವ ಸಂದರ್ಭದಲ್ಲಿ ಈ ರೀತಿಯಾದ ವಿಶಿಷ್ಟ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಪ್ರಯತ್ನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೇ ರೀತಿ ಎಲ್ಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಪ್ರಯತ್ನಿಸಿದರೆ ನಮ್ಮ ಸರ್ಕಾರಿ ಶಾಲೆಗಳು ಉಳಿಯಲಿವೆ ಎನ್ನುವುದು ಶಿಕ್ಷಣ ಇಲಾಖೆಯ ಅಭಿಪ್ರಾಯವಾಗಿದ್ದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಅವರ ನಡೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು, ಪ್ರತಿಜ್ಞಾವಿಧಿ ವಿಡಿಯೋ ಎಲ್ಲೆಡೆ ಟ್ರೆಂಡ್ ಆಗುತ್ತಿದೆ.
PublicNext
23/08/2022 08:57 am