ಬೆಂಗಳೂರು: ಸರ್ಕಾರಿ ಮಾದರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಳೇ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಾಲೆ ಉಳಿಸಿ: ಕನ್ನಡ ಬೆಳೆಸಿ’ ಕುರಿತು ದುಂಡು ಮೇಜಿನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಬೆಳೆಸಲು ಕನ್ನಡ ಮಾಧ್ಯಮದ ಜೊತೆಗೆ ಸರ್ಕಾರಿ ಮಾದರಿ ಶಾಲೆಗಳಲ್ಲಿ 'ಸ್ಪೋಕನ್ ಇಂಗ್ಲೀಷ್' ಕಲಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ಹೋಬಳಿ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದೊಂದು ಮಾದರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. ಇದರ ಅನುದಾನಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈ ಅಂಶವನ್ನು ಘೋಷಿಸಲಾಗಿದೆ. ಶಾಲೆಯ ಎಲ್ಲ ತರಗತಿಗಳಿಗೆ ಅಗತ್ಯ ಕೊಠಡಿಗಳು ಮತ್ತು ಎಲ್ಲ ಭಾಷೆ ಮತ್ತು ವಿಷಯಕ್ಕೆ ತಲಾ ಒಬ್ಬರು ಶಿಕ್ಷಕರು ಲಭ್ಯವಿರುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇಂತಹ ಶಾಲೆಗಳಲ್ಲಿ ಕನ್ನಡ ಕಲಿಕೆ ಜೊತೆಗೆ ಇಂಗ್ಲೀಷ್ ಕಲಿಕೆ ಹಾಗೂ ಶಿಕ್ಷಕರಿಂದ ಸ್ಪೋಕನ್ ಇಂಗ್ಲೀಷ್ ಕಲಿಸಿಕೊಡಲಾಗುತ್ತದೆ. ಈ ಬಗ್ಗೆ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಸಲಹೆ ನೀಡಿದ್ದು, ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ.
PublicNext
06/04/2022 10:47 am