ಬೆಂಗಳೂರು: 2021ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇನ್ನೂ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಿಲ್ಲ. ಇದರಿಂದಾಗಿ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ ಮತ್ತು ಇತರೆ ಖಾಸಗಿ ವಿಶ್ವವಿದ್ಯಾನಿಲಯಗಳು ತಮ್ಮ ವ್ಯಾಪ್ತಿಯ ಕಾಲೇಜಿನ ಸೀಟುಗಳ ಭರ್ತಿಗೆ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆಯನ್ನು ತಡ ಮಾಡುವಂತಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಕೂಡ ಕೆಸಿಇಟಿ ಕೌನ್ಸೆಲಿಂಗ್ ಬೇಗ ಆರಂಭಿಸಲು ಕೆಇಎ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಕೆಸಿಇಟಿಗೂ ಮೊದಲೇ ತಮ್ಮ ಕಾಲೇಜು ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಿದರೆ ನಂತರ ಕೆಸಿಇಟಿ ಸೀಟು ಸಿಕ್ಕವರು ತಮ್ಮ ಕಾಲೇಜು ತೊರೆಯುತ್ತಾರೆ. ಮತ್ತೊಂದೆಡೆ ಕೌನ್ಸೆಲಿಂಗ್ ವಿಳಂಬದಿಂದ ತಮ್ಮ ಸೀಟುಗಳಿಗೆ ಪ್ರವೇಶ ಪಡೆಯಲು ಕಾಯುತ್ತಿರುವ ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ವಲಸೆ ಹೋಗುವ ಆತಂಕವೂ ಎದುರಾಗಿದೆ ಎನ್ನುತ್ತಾರೆ ಖಾಸಗಿ ಕಾಲೇಜುಗಳ ಮುಖ್ಯಸ್ಥರು.
PublicNext
21/10/2021 01:07 pm