ಬೆಂಗಳೂರು: 2020–21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ತಿರಸ್ಕರಿಸಿದ್ದ ಹೊಸ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಶೇ 29.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 18,413 ವಿದ್ಯಾರ್ಥಿಗಳಲ್ಲಿ 5,507 (ಶೇಕಡ 29.91) ತೇರ್ಗಡೆಯಾಗಿದ್ದಾರೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ.36.72ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು ಶೇ.26.06ರಷ್ಟು ತೇರ್ಗಡೆಯಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಎಲ್ಲ ವಿದ್ಯಾರ್ಥಿಗಳನ್ನು ಸರ್ಕಾರ ಪಾಸ್ ಮಾಡಿತ್ತು. ಆದರೆ ಇದನ್ನು ಚಾಲೆಂಜ್ ಮಾಡಿದ 592 ವಿದ್ಯಾರ್ಥಿಗಳು ಪರೀಕ್ಷೆ ಬರೆದೇ ಇನ್ನೂ ಉತ್ತಮ ಅಂಕ ಗಳಿಸುತ್ತೇವೆ ಎಂದು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಬರೆದ ಒಟ್ಟು 592 ಹೊಸಬರಲ್ಲಿ 556 ತೇರ್ಗಡೆ ಹೊಂದಿದ್ದು, 36 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.
ಪುನರಾವರ್ತಿತ 351 ವಿದ್ಯಾರ್ಥಿಗಳಲ್ಲಿ 183 ಪಾಸ್, 168 ಫೇಲ್ ಆಗಿದ್ದರೆ, ಖಾಸಗಿ 17,470ರಲ್ಲಿ 4,768 ಉತ್ತೀರ್ಣ, 12,906 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ.70.83, ವಾಣಿಜ್ಯ- ಶೇ.24.98, ಕಲೆ ವಿಭಾಗದಲ್ಲಿ ಶೇ.32.06 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ತೇರ್ಗಡೆಯಾದವರಲ್ಲಿ ಗ್ರಾಮೀಣ ಶೇ.32.59, ನಗರ ಶೇ.28.62ರಷ್ಟು ವಿದ್ಯಾರ್ಥಿಗಳಿದ್ದಾರೆ.
ಈ ಲಿಂಕ್‌ನಲ್ಲಿ www.karresults.nic.in ಫಲಿತಾಂಶ ಸಿಗಲಿದೆ.
PublicNext
20/09/2021 05:05 pm