ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ದೇಶ ಕಂಡ ಭ್ರಷ್ಟ ಸರ್ಕಾರ. ನಾವು ಜೋಡಿಸುತ್ತೇವೆ, ಬಿಜೆಪಿಯವರು ಮುರಿಯುತ್ತಾರೆ. ನಾವು ಪ್ರೀತಿ ಕೊಡುತ್ತೇವೆ, ಅವರು ದ್ವೇಷಿಸುತ್ತಾರೆ. ಹಿಂದೂ ಹಾಗೂ ಮುಸ್ಲಿಂರ ಜೋಡಣೆ ನಮ್ಮ ಕಾರ್ಯ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.
ದಾವಣಗೆರೆಯ ಬಾಪೂಜಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರನ್ನು ಕೆರಳಿಸುವುದು ಬಿಜೆಪಿಯ ಕೆಲಸ. ಉತ್ತರ ಪ್ರದೇಶದಲ್ಲಿ ದಲಿತ- ಬ್ರಾಹ್ಮಣ, ಹಿಂದೂ ಮುಸ್ಲಿಂ, ಸಿಖ್- ಹಿಂದೂ, ಮರಾಠ, ಘೇರ್ ಮರಾಠ ಹೀಗೆ ಜಾತಿ ಜಾತಿಗಳ ಮಧ್ಯೆ ಬಿಜೆಪಿ ಸಂಘರ್ಷ ಹುಟ್ಟು ಹಾಕುತ್ತಿದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಂತೆ ಬಿಜೆಪಿ ಕೆಲಸ ನಿರ್ವಹಿಸುತ್ತಿದೆ ಎಂದು ದೂರಿದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ, ಮಠವನ್ನೂ ಬಿಟ್ಟಿಲ್ಲ. ಅಲ್ಲಿಯೂ ಕಮಿಷನ್ ಕೇಳಿದೆ. ಅಷ್ಟು ಭ್ರಷ್ಟ ಸರ್ಕಾರ ನಡೆಸಿದೆ. ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಡಿಜಿಪಿ ಸೇರಿದಂತೆ ಪೊಲೀಸರು ಬಂಧನಕ್ಕೆ ಒಳಗಾಗಿರುವುದು ಇದೇ ಮೊದಲು. ಡಿವೈಎಸ್ಪಿ, ಎಸ್ಪಿ, ಡಿಜಿಪಿ, ಐಜಿಪಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಆಗ ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಏನು ಮಾಡಿದ್ದರು. ಸಿಎಂ ಆದ ಬಳಿಕ ಏನು ಮಾಡಿದ್ದಾರೆ. ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಲೀಂ ಅಹಮ್ಮದ್, ಧೃವನಾರಾಯಣ, ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಎಸ್.ರಾಮಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ದಿನೇಶ್ ಶೆಟ್ಟಿ, ಡಿ.ಬಸವರಾಜ್, ಹೆಚ್.ಪಿ ರಾಜೇಶ್ ಇತರರು ಇದ್ದರು.
PublicNext
09/10/2022 06:44 pm