ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಹೊರಬರುತ್ತದೆ ಎಂಬುದಕ್ಕೆ ಪಾಲಿಕೆ ಮೇಯರ್ ಸ್ಥಾನ ಎಸ್ಟಿ ಮೀಸಲಾತಿ ನೀಡಿರುವುದೇ ಸಾಕ್ಷಿ. ಪಾಲಿಕೆ ಚುನಾವಣೆ ನಡೆದಾಗ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿಯವರು ದಾವಣಗೆರೆಯಲ್ಲಿ ಇಲ್ಲದ ವ್ಯಕ್ತಿಗಳನ್ನು ಸೇರಿಸಿಕೊಂಡು ಮೋಸ ಮಾಡಿದ್ದಾರೆ ಎಂದರು.
ವಾಸ ಇಲ್ಲದ ವಿಧಾನ ಪರಿಷತ್ ಸದಸ್ಯರ ಹೆಸರು ಸೇರಿಸಿ ಮೋಸದಿಂದ ಅಧಿಕಾರಕ್ಕೇರಿತ್ತು. ಈಗ ಹೈಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರವು ಪಾಲಿಕೆಯ ನಾಲ್ಕನೇ ಅವಧಿಗೆ ಎಸ್ಟಿ ಮೀಸಲಾತಿ ನೀಡಬೇಕು. ಅಧಿಕಾರ ದುರುಪಯೋಗ ಮಾಡಿಕೊಂಡರೆ ಒಂದಲ್ಲಾ ಒಂದು ದಿನ ಸತ್ಯ ಹೊರಬರುತ್ತದೆ. ಹಾಗೆಯೇ ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಕಾನೂನು ಹಾಗೂ ನಿಯಮದ ಪ್ರಕಾರ ಪಾಲಿಕೆ ಮೇಯರ್ ಸ್ಥಾನಕ್ಕೆ ಎಸ್ಟಿ ಮೀಸಲಾತಿ ನೀಡಬೇಕಿತ್ತು. ಎರಡು ಬಾರಿ ಸಾಮಾನ್ಯ ಹಾಗೂ ಮೂರನೇ ಅವಧಿಗೆ ಎಸ್ಸಿ ಮಹಿಳಾ ಮೀಸಲಾತಿ ಆಗಿತ್ತು. ನಾಲ್ಕನೇ ಬಾರಿ ಎಸ್ಟಿಗೆ ಮೀಸಲಾತಿ ಘೋಷಣೆ ಮಾಡಬೇಕಿತ್ತು.
ಆದರೆ, ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನಿ ಹಾಗೂ ಅವರ ಪತಿ ಗಣೇಶ್ ಹುಲ್ಲುಮನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಾನೂನಿನ ಪ್ರಕಾರ ಎಸ್ಟಿಗೆ ಮೀಸಲಾತಿ ನಿಗದಿ ಪಡಿಸಿ ತೀರ್ಪು ನೀಡಿದೆ.
ಆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಈಗ ಅಧಿಸೂಚನೆ ಹೊರಡಿಸಿದ್ದು, ದಾವಣಗೆರೆ ಎಸ್ಟಿಗೆ ಮೇಯರ್ ಸ್ಥಾನ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಿಜೆಪಿಯ ಕುತಂತ್ರ ರಾಜಕಾರಣ ಬಟಾಬಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
PublicNext
30/09/2022 07:38 pm