ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎನ್ನುವ ಹೋರಾಟ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆಗೆ ಬೆಂಬಲವೂ ವ್ಯಕ್ತವಾಗುತ್ತಿದೆ.
ಈಗ ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಹೋರಾಟದ ಕಾವು ಮತ್ತಷ್ಟು ಹೆಚ್ಚಾಗಲಿದೆ. ವಚನಾನಂದ ಸ್ವಾಮೀಜಿ ಸಹ 2ಎ ಮೀಸಲಾತಿ ನೀಡಲು ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯಕ್ಕೆ ಮುಂದಾಗಿದ್ದು, ಭಕ್ತರ ಅಪೇಕ್ಷೆ ಮೇರೆಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳುತ್ತಿದ್ದಂತೆಯೇ ಹರಿಹರದಲ್ಲಿ ನಡೆದ ಸಭೆಯಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು. ಜೈಕಾರ ಹಾಕಿ ಸಂಭ್ರಮಿಸಿದರು.
ಜಯಮೃತ್ಯುಂಜಯ ಸ್ವಾಮೀಜಿ ಜೊತೆಗೆ ಪಾದಯಾತ್ರೆಗೆ ತೆರಳುತ್ತೇನೆ. ಭಕ್ತರ ಆಸೆ ನಮ್ಮ ಆಸೆ. ದಾವಣಗೆರೆಯ ಚನ್ನಮ್ಮ ವೃತ್ತದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡ್ತೀನಿ. ಸಮುದಾಯದ ಶಾಸಕರು ಸಿಎಂ ಯಡಿಯೂರಪ್ಪರ ಮೇಲೆ ಒತ್ತಡ ಹೇರಬೇಕು. ನಾವು ಪಾದಯಾತ್ರೆಯ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡ್ತೀವಿ. ಹಿಮಾಲಯದಲ್ಲಿ ಮೈನಸ್ ಡಿಗ್ರಿಯ ಸ್ಥಳಕ್ಕೆ ಹೋದ ಶರೀರ ನನ್ನದು. ಪಾದಯಾತ್ರೆ ಮಾಡಲು ಯಾವ ಸಮಸ್ಯೆ ಇಲ್ಲ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
PublicNext
30/01/2021 09:58 pm