ತುಮಕೂರು: ನಾಪತ್ತೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಶವವಾಗಿ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಎಸ್.ಸುಧಾ(39) ಶವವಾಗಿ ಅರಸೀಕೆರೆ ತಾಲೂಕಿನ ಪೊದೆಯೊಂದರಲ್ಲಿ ಪತ್ತೆಯಾಗಿದ್ದಾರೆ.
ಸೆ.13ರಂದು ಸುಧಾ ನಾಪತ್ತೆಯಾಗಿದ್ದರು. ಈ ನಡುವೆ ಇವರ ಚಿಕ್ಕಪ್ಪನ ಮಗ, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್ (26) ಶಿವಮೊಗ್ಗ ನಗರದ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
ಸೆ.13ರಂದು ಸುಧಾ ಮತ್ತು ಮಂಜುನಾಥ್ ಇಬ್ಬರೂ ಚಿಕ್ಕನಾಯಕನಹಳ್ಳಿಯಲ್ಲಿ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಸಂಜೆ 8.40ರಿಂದ ಇಬ್ಬರ ಫೋನ್ ಸಂಪರ್ಕ ಕಡಿತವಾಗಿತ್ತು. ಸುಧಾ ನಾಪತ್ತೆಯಾಗಿದ್ದಾರೆ ಎಂದು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬಳಿಕ ಶಿವಮೊಗ್ಗದ ಲಾಡ್ಜ್ ನಲ್ಲಿ ಸೆ.16ರ ಸಂಜೆ ಮಂಜುನಾಥ್ ಶವವಾಗಿ ಪತ್ತೆಯಾಗಿದ್ದ. ಅಲ್ಲಿ ಡೆತ್ ನೋಟ್ ಕೂಡ ಸಿಕ್ಕಿತ್ತು. ನನ್ನ ದೊಡ್ಡಮ್ಮನ ಮಗಳಾದ ಅಕ್ಕ ಸುಧಾಳನ್ನು ಕೊಲೆಮಾಡಿದ್ದು ಬೀದಿ ಹೆಣ ಮಾಡಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದ.
ಸೆ.17 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗ್ರಾಮದ ಬಳಿ ಪೊದೆಯೊಂದರಲ್ಲಿ ಸುಧಾ ಶವ ಪತ್ತೆಯಾಗಿದೆ. ಹಣಕಾಸು ವ್ಯವಹಾರಕ್ಕೆ ಸುಧಾರನ್ನು ಕಾರಿನಲ್ಲಿ ಕರೆದುಕೊಂಡು ಬಂದು ಮಂಜುನಾಥ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹುಳಿಯಾರು ಸಮೀಪದ ಕೆರೆ ಸೂರಗನಹಳ್ಳಿಯ ಮಂಜುನಾಥ್ ಆನ್ ಲೈನ್ ಬೆಟ್ಟಿಂಗ್ ಗೆ ದಾಸನಾಗಿದ್ದು, ಹಣಕಾಸು ವಿಚಾರದಲ್ಲಿಯೂ ಎಡವಟ್ಟು ಮಾಡಿಕೊಂಡಿದ್ದ ಎನ್ನಲಾಗಿದೆ. ಸುಧಾ ಅವರ ಪತಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಇದ್ದಾರೆ.
PublicNext
18/09/2022 10:10 am