ಗೋಕಾಕ : ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ವಿಶೇಷವಾಗಿ ಗೋಕಾಕ ಪಟ್ಟಣವಂತೂ ಕಳ್ಳರ ಪಾಲಿನ ಸ್ವರ್ಗವಾದಂತಾಗಿದೆ. ಇನ್ನು ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಮಾಂಗಲ್ಯ, ಚಿನ್ನದ ಸರ ಎಗರಿಸುವುದು ಮಾಮೂಲಾಗಿದೆ.
ಕಾರಣ ಇಷ್ಟೇ.... ಒಂದು ರೀತಿ ಪೊಲೀಸರ ಉದಾಸೀನತೆ. ಕಳ್ಳತನ ಪ್ರಕರಣ ದಾಖಲಿಸುವ ಬದಲು ದೂರುದಾರರಿಗೆ ಭರವಸೆ ನೀಡಿ ಕಳಿಸಲಾಗುತ್ತಿರುವುದು. ಇಷ್ಟು ಮಾತ್ರವಲ್ಲ, ಒಂದು ವೇಳೆ ಕಳ್ಳತನದ ವಸ್ತುಗಳು ಸಿಕ್ಕರೂ ನೀವು ಕೋರ್ಟು ಕಚೇರಿ ಅಲೆಯಬೇಕಾಗುತ್ತೆ, ಕಂಪ್ಲೆಂಟ್ ಕೊಟ್ಟು ಕಿರಿ ಕಿರಿ ಮಾಡಿಕೊಳ್ಳಬೇಡಿ ಎಂಬ ಬುದ್ಧಿ ಮಾತು ಹೇಳಿ ಸಾರ್ವಜನಿಕರನ್ನು ಕಳಿಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಕಳ್ಳತನದ ಪ್ರಕರಣ ದಾಖಲಿಸಿಕೊಳ್ಳದಿರುವುದು ಕಳ್ಳರಿಗೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಭಾನುವಾರ ಗೋಕಾಕ ನಗರದ ಮೂರು ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ನಗರದ ಆಶ್ರಯ ಬಡಾವಣೆ ಸೇರಿದಂತೆ ರೋಟರಿ ಬ್ಲಡ್ ಬ್ಯಾಂಕ್ ಹತ್ತಿರ ಇರುವ ಮಹಮ್ಮ ಅಲಿ ನೇಗಿನಾಳ ಎಂಬುವವರು ಮನೆಯಲ್ಲಿಯೇ ಇದ್ದರೂ ಸಹ ಖದೀಮರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಮಹಮ್ಮದ ಅಲಿ ಹಾಗೂ ಕುಟುಂಬಸ್ಥರು ಎರಡನೇ ಅಂತಸ್ತಿನಲ್ಲಿ ಕುಟುಂಬದೊಂದಿದೆ ನಿದ್ರೆಯಲ್ಲಿರುವಾಗ ಖದೀಮರು ಕೆಳಗಿನ ಅಂತಸ್ತಿನ ಕೀಲಿ ಮುರಿದು ಮನೆಯಲ್ಲಿದ್ದ 1.30 ಲಕ್ಷ ರೂಪಾಯಿ ಹಣ ಹಾಗೂ ಕಿವಿಯೋಲೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಮಾಧ್ಯಮದವರು ನಗರದ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರಿಗೆ ಕರೆ ಮಾಡಿದರೆ ಅಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಫ್ ಐ ಆರ್ ದಾಖಲಾಗಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.
ಆದರೆ ಇತ್ತ ನಗನಾಣ್ಯ ಕಳೆದುಕೊಂಡವರು ನಾವು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದೇವೆ. ಪೊಲೀಸರು ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ . ಪದೇ ಪದೇ ಕಳ್ಳತನ ಪ್ರಕರಣಗಳು ಗೋಕಾಕ ಜನರನ್ನು ಕಂಗೆಡಿಸಿದ್ದು ಜನ ನೆಮ್ಮದಿಯಿಂದ ರಾತ್ರಿ ಮಲಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ನಡೆದ ಅನೇಕ ಕಳ್ಳತನದ ಪ್ರಕರಣಗಳು ಈವರೆಗೂ ಪತ್ತೆ ಆಗಿಲ್ಲ. ಕಳ್ಳರನ್ನು ಹೆಡಮುರಿ ಕಟ್ಟುವಲ್ಲಿ ಗೋಕಾಕ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರುವಂತಾಗಿದೆ.
PublicNext
13/07/2022 08:52 am