ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ವೃದ್ಧೆ ಸಾವನ್ನಪ್ಪಿದ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಮುಂದೆ ಮೃತದೇಹವನ್ನು ಇಟ್ಟು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೆ.ಆರ್. ರಸ್ತೆಯಲ್ಲಿರುವ ಗುರುನಾಥ್ ಬೊಂದಡೆ ಆಸ್ಪತ್ರೆಯಲ್ಲಿ ನಡೆದಿದೆ.
65 ವರ್ಷದ ಅನ್ನಪೂರ್ಣಮ್ಮ ಮೃತಪಟ್ಟ ಮಹಿಳೆ. ತಾಯಿಯ ಜೀವ ಕಳೆದಿದ್ದಾನೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಮೃತರ ಕುಟುಂಬದವರು, ಸಂಬಂಧಿಕರು ಸಿಟ್ಟು ಹೊರಹಾಕಿದರು.
* ಘಟನೆ ಹಿನ್ನೆಲೆ: ವೃದ್ಧೆ ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದರು. ಅದರಂತೆ ಶಸ್ತ್ರಚಿಕಿತ್ಸೆ ಸಹ ಮಾಡಿದ್ದರು. ಹೊಟ್ಟೆ ಕೊಯ್ದು ಹಾಗೇ ಬಿಟ್ಟ ಆರೋಪ ವೈದ್ಯ ದೀಪಕ್ ಬೊಂದಡೆ ಮೇಲಿದೆ. ಆಪರೇಷನ್ ಮಾಡಿ 15 ದಿನ ಆದರೂ ಹೊಲಿಗೆ ಹಾಕಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ಕೇಳಿದರೆ ತನ್ನಷ್ಟಕ್ಕೆ ತಾನೇ ಕೂಡಿಕೊಳ್ಳುವುದು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು.
ಯಾವುದೇ ರಶೀದಿ ನೀಡದೆ 3 ಲಕ್ಷ ರೂ.ಗಿಂತ ಅಧಿಕ ಬಿಲ್ ಕಟ್ಟಿಸಿಕೊಂಡಿದ್ದ ಆಸ್ಪತ್ರೆಯವರು, ಆರೋಗ್ಯದಲ್ಲಿ ಏರುಪೇರಾದಾಗ ಉಡಾಫೆ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ಅನ್ನಪೂರ್ಣಮ್ಮರನ್ನು ಮಕ್ಕಳು ಸೇರಿಸಿದ್ದರು. 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಜೀವ ಇಂದು ಬೆಳಿಗ್ಗೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಸವನಗರ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಹಬದಿಗೆ ತರುವಲ್ಲಿ ಯಶಸ್ವಿಯಾದರು.
PublicNext
30/06/2022 07:25 pm