ಹಾವೇರಿ: ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸ್ಫಟಿಕ ಶಿವಲಿಂಗ ಕಳ್ಳತನವಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಂಗದಹಳ್ಳಿ ಹಿರೇಮಠದ ಬಾಗಿಲು ಮುರಿದಿರುವ ಕಳ್ಳರು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದ ಸ್ಫಟಿಕ ಲಿಂಗವನ್ನು ಕದ್ದು ಪರಾರಿಯಾಗಿದ್ದಾರೆ. ಇದು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎಂಬ ಖ್ಯಾತಿ ಪಡೆದಿತ್ತು. ಸೋಮವಾರ ರಾತ್ರಿ ಮಠದಲ್ಲಿ ಶ್ರೀಗಳಾದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಇಲ್ಲದ ವೇಳೆ ಕಳ್ಳರು ಈ ದುಷ್ಕೃತ್ಯ ಎಸಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಮಠದಲ್ಲಿ ಸಾವಿರದ ಒಂದು ಶಿವಲಿಂಗಗಳಿವೆ. ಜೊತೆಗೆ, ದೇಶದ ವಿವಿಧೆಡೆ ಇರುವ 12 ಜ್ಯೋತಿರ್ಲಿಂಗಗಳನ್ನೂ ಸಹ ಇಲ್ಲಿ ಸ್ಥಾಪಿಸಲಾಗಿದೆ. ದೇಶದಲ್ಲಿರುವ 18 ಶಕ್ತಿದೇವತೆಗಳು ಈ ಮಠದ ಕಂಬಗಳ ಮೇಲೆ ಅನಾವರಣಗೊಂಡಿವೆ.
PublicNext
07/06/2022 03:14 pm