ಲಕ್ನೋ: ವ್ಯಕ್ತಿಯೋರ್ವ ತನ್ನ ಪತ್ನಿ, ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆಗೈದು ಬಳಿಕ ತಾನೂ ನೇಣು ಹಾಕಿಕೊಂಡ ಘಟನೆ ಉತ್ತರ ಪ್ರದೇಶದ ಗಾಜಿಪುರ್ ಜಿಲ್ಲೆಯ ಸಾದತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾದತ್ ಪಟ್ಟಣದ ನಿವಾಸಿ ಶಿವದಾಸ್ ಅಲಿಯಾಸ್ ಡಬ್ಲ್ಯೂ ಸೋಂಕರ್ (36) ರೈಲ್ವೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಎಂಟು ವರ್ಷಗಳ ಹಿಂದೆ ರೀನಾ ಸೋಂಕರ್ ಎಂಬವರನ್ನು ಮದುವೆಯಾಗಿದ್ದರು. ಇವರಿಗೆ ರಾಹುಲ್ (6) ಮತ್ತು ತೇಜಲ್ (4) ಇಬ್ಬರು ಮಕ್ಕಳಿದ್ದರು. ಈತ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ನೊಂದ ಹೆಂಡತಿ ಸುಮಾರು ಒಂದು ವರ್ಷ ತನ್ನ ತಾಯಿಯ ಮನೆಯಲ್ಲಿದ್ದಳು. ಬಳಿಕ ಪೋಷಕರು ಮನವೊಲಿಸಿ ಮತ್ತೆ ಒಂದು ಮಾಡಿದ್ದರು ಎಂದು ತಿಳಿದುಬಂದಿದೆ.
ದಂಪತಿಯ ಮಧ್ಯೆ ಶನಿವಾರ ಮತ್ತೆ ಇಬ್ಬರ ನಡುವೆ ಜಗಳವಾಗಿತ್ತು. ಹೆಂಡತಿ ಮತ್ತು ಆರು ವರ್ಷದ ಮಗ ಮತ್ತು ನಾಲ್ಕು ವರ್ಷದ ಮಗಳನ್ನು ಕೊಂದು ಆತ ಕೂಡ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಬಾಗಿಲು ಒಡೆದು ನೋಡಿದಾಗ ಮನೆಯೊಳಗೆ ನಾಲ್ವರ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
PublicNext
18/04/2022 04:45 pm