ಬೆಳಗಾವಿ: ನಿನ್ನೆ ಮಂಗಳವಾರ ಇಡೀ ನಗರವೇ ಬೆಚ್ಚಿಬೀಳುವಂತೆ ಬಿಲ್ಡರ್ ಒಬ್ಬರ ಕೊಲೆಯಾಗಿತ್ತು. ಬೆಳಿಗ್ಗೆ ವಾಕಿಂಗ್ ಹೋಗಲು ಕಾರಿನಲ್ಲಿ ಹೊರಟಿದ್ದ ಉದ್ಯಮಿ ರಾಜು ಮಲ್ಲಪ್ಪ ದೊಡ್ಡಬಣ್ಣವರ್ ಎಂಬಾತನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.
ಈ ಕೊಲೆಯ ನಂತರ ರಾಜು ಬಗ್ಗೆ ಕೆಲವು ಸಂಗತಿಗಳು ಹೊರಬಂದಿವೆ. 45 ವರ್ಷ ವಯಸ್ಸಿನ ರಾಜು ಮೂರು ಮದುವೆ ಆಗಿದ್ದ. ಈ ವಿಷಯ ಆತನ ಮೂವರೂ ಪತ್ನಿಯರಿಗೆ ಗೊತ್ತಿತ್ತು. ಮೂರು ಸಂಸಾರಗಳು ನೆಮ್ಮದಿಯಿಂದ ಸಾಗುತ್ತಿದ್ದವು. 22 ವರ್ಷಗಳ ಹಿಂದೆ ಉಮಾ ಎಂಬುವವರನ್ನು ಮದುವೆ ಆಗಿದ್ದ. ಈಕೆಗೆ ಎರಡು ಮಕ್ಕಳಿದ್ದು ಇಬ್ಬರೂ ಮೆಡಿಕಲ್ ಓದುತ್ತಿದ್ದಾರೆ. ಸುಮಾರು ವರ್ಷಗಳ ಹಿಂದೆ ಮೊದಲ ಪತ್ನಿ ರಾಜುನನ್ನು ತೊರೆದು ಬೆಂಗಳೂರು ಸೇರಿಕೊಂಡಿದ್ದಾಳೆ.
ಎಂಟು ವರ್ಷಗಳ ಹಿಂದೆ ಮಹಾರಾಷ್ಟ್ರ ಲಾತೂರ್ ಮೂಲದ ಕಿರಾಣಾ ಎಂಬಾಕೆಯನ್ನು ರಾಜು ಮದುವೆ ಆಗಿದ್ದ ಅವರಿಗೂ ಎರಡು ಮಕ್ಕಳಿವೆ. ನಂತರ ಹಳಿಯಾಳ ಮೂಲದ ದೀಪಾ ಎಂಬಾಕೆಯನ್ನೂ ರಾಜು ಮದುವೆ ಆಗಿದ್ದ ಸದ್ಯ ಆಕೆ ಗರ್ಭಿಣಿಯಾಗಿದ್ದಾಳೆ. ಮೂವರೂ ಹೆಂಡತಿಯರಿಗೆ ಪ್ರತ್ಯೇಕ ಮನೆ ಮಾಡಿ ಸುಖವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ಸದ್ಯ ನಾಲ್ಕು ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ.
ಹಲವರ ಬಳಿ ಹಣ ಪಡೆಯುತ್ತಿದ್ದ ರಾಜು, ಬೇಕಾಬಿಟ್ಟಿಯಾಗಿ ಖರ್ಚು ಮಾಡ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಹಣ ಕೊಟ್ಟವರು ಇತ್ತೀಚೆಗೆ ಮನೆ ಬಳಿ ಬಂದು ಹೋಗಿದ್ದರಂತೆ. ಇದಾದ ನಂತರ ರಾಜು ಬರ್ಬರವಾಗಿ ಕೊಲೆಯಾಗಿದ್ದಾನೆ.
ಸದ್ಯ ಈತನನ್ನು ನಂಬಿ ಬ್ಯುಸಿನೆಸ್‌ನಲ್ಲಿ ಹಣ ಹೂಡಿದ್ದ ಇತರ ಉದ್ಯಮಿಗಳು ಕಂಗಾಲಾಗಿದ್ದಾರೆ. ಹಾಗೂ ಮೂರು ಸಂಸಾರಗಳೂ ಅತಂತ್ರ ಸ್ಥಿತಿಗೆ ಬಂದು ತಲುಪಿವೆ.
PublicNext
16/03/2022 01:16 pm