ನವದೆಹಲಿ: ದೆಹಲಿ ಕೆಂಪು ಕೋಟೆಯ ಬಳಿ ನಿನ್ನೆ (ಸೋಮವಾರ) ರಾತ್ರಿ ಗುಂಡಿನ ಸದ್ದು ಕೇಳಿ ಬಂದಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಗಾಯಾಳುಗಳನ್ನು ಆಬಿದ್, ಅಮನ್ ಮತ್ತು ದೀಫರಾಜ್ ಎಂದು ಗುರುತಿಸಲಾಗಿದೆ. ಈ ಮೂವರ ಕಾಲು, ತೊಡೆ ಮತ್ತು ಬೆನ್ನಿನ ಮೇಲೆ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ಮೊಹಮ್ಮದ್ ಶಾಹಿದ್ ಎಂಬವರು ಪತ್ನಿಯೊಂದಿಗೆ ಊಟಕ್ಕೆ ಹೊರಗೆ ಹೋಗಿದ್ದರು. ಬಳಿಕ ರಾತ್ರಿ ದ್ವಿಚಕ್ರ ವಾಹನದಲ್ಲಿ ಅಂಗೂರಿ ಬಾಗ್ ಪ್ರದೇಶದ ಅವರ ಮನೆಯ ಬಳಿಗೆ ಬಂದಿದ್ದರು. ಈ ವೇಳೆ ಎದುರಿಗೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕರಿಬ್ಬರು ಆಕಸ್ಮಿಕವಾಗಿ ಶಾಹಿದ್ ಅವರ ವಾಹನಕ್ಕೆ ಅಡ್ಡಗಟ್ಟಿ ಸಣ್ಣ ಹಾನಿಯನ್ನುಂಟುಮಾಡಿದ್ದರು. ಇದರಿಂದಾಗಿ ವಾಗ್ವಾದ ನಡೆದು ಶಾಹಿದ್ ತನ್ನ ವಾಹನವನ್ನು ರಿಪೇರಿ ಮಾಡಿಸಿಕೊಡುವಂತೆ ಇಬ್ಬರನ್ನು ಕೇಳಿದ್ದರು. ಇದಕ್ಕೆ ಒಪ್ಪದ ಯುವಕರು ತಮ್ಮ ಸಹೋದರರನ್ನು ಕರೆಸಿದಾಗ ಜಗಳ ಆರಂಭವಾಗಿದೆ. ಸ್ಥಳೀಯರು ಸುತ್ತುವರೆದು ಹಿಡಿಯಲು ಮುಂದಾಗುತ್ತಿದ್ದಂತೆ ಯುವಕರು ಐದು ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
01/02/2022 06:53 pm