ದಾವಣಗೆರೆ: ರೈಲ್ವೆ ಹಳಿ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕನೋರ್ವ ಪ್ರಾಣ ಕಳೆದುಕೊಂಡ ಘಟನೆ ನಗರದ ಡಿಸಿಎಂ ಟೌನ್ ಶಿಪ್ ಬಳಿ ಸಂಭವಿಸಿದೆ.
ಭಗತ್ ಸಿಂಗ್ ನಗರದ ಮೂರನೇ ಮುಖ್ಯರಸ್ತೆಯ 12ನೇ ಕ್ರಾಸ್ ನಿವಾಸಿ 15 ವರ್ಷದ ಸಚಿನ್ ಡೇವಿಡ್ ಮೃತಪಟ್ಟ ಬಾಲಕ. ಸಚಿನ್ ಸ್ನೇಹಿತರೊಂದಿಗೆ ಡಿಸಿಎಂ ಟೌನ್‌ಶಿಪ್ ಬಳಿಯ ರೈಲ್ವೆ ಹಳಿಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದ ಪರಿಣಾಮ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಎರಡು ಜೋಡಿ ಹಳಿಯಲ್ಲಿ ರೈಲು ಯಾವ ಹಳಿ ಮೇಲೆ ಬರುತ್ತಿದೆ ಎನ್ನುವುದು ಸೆಲ್ಫಿ ತೆಗೆಯುವ ಗುಂಗಿನಲ್ಲಿದ್ದ ಬಾಲಕ ಸಚಿನ್‌ಗೆ ತಿಳಿದಿರಲಿಲ್ಲ. ಇದೇ ರೈಲು ಡಿಕ್ಕಿ ಹೊಡೆಯಲು ಕಾರಣವಾಗಿದೆ ಎನ್ನಲಾಗಿದೆ.
ಮೃತ ಬಾಲಕನ ಶವ ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
24/01/2022 08:41 am