ಸುಳ್ಯ: ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿ ತನ್ನ ಮೇಲೆ ಸುಳ್ಳು ಪ್ರಕರಣವೊಂದಕ್ಕೆ ಸಂಬಂಧಿಸಿ ಠಾಣೆಗೆ ಕರೆಸಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಯುವಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕಿದ್ದಾರೆ. ಈ ವೀಡಿಯೊದಲ್ಲಿ ಆ ಯುವಕನ ಮುಖ ಊದಿಕೊಂಡಿರುವುದು ಕಂಡು ಬಂದಿದೆ.
ಪಾಲ್ತಾಡಿ ಸಮೀಪದ ಮಣಿಕ್ಕರ ಕೊಡ್ಯಕ್ಕ ನಿವಾಸಿ, ಟಿ.ವಿ. ರಿಪೇರಿ ಕೆಲಸ ಮಾಡುತ್ತಿರುವ ಅಜಿತ್ ಎಸ್. ಎಂಬ ಯುವಕ ಈ ವೀಡಿಯೊದಲ್ಲಿರುವವರು. ಬೆಳ್ಳಾರೆ ಪೊಲೀಸ್ ಠಾಣೆ ಸಿಬ್ಬಂದಿ ಬಾಲು ಸರ್ ಮತ್ತು ಇನ್ನೊಬ್ಬ ಪೊಲೀಸ್ ಸಿಬ್ಬಂದಿ ತನ್ನನ್ನು ವಿವಸ್ತ್ರಗೊಳಿಸಿ ತೀವ್ರ ಹಲ್ಲೆ ನಡೆಸಿರುವುದಾಗಿ ಅಜಿತ್ ಆರೋಪಿಸಿದ್ದಾರೆ.
ಠಾಣೆಯಲ್ಲಿನ ಆ ದಿನದ ಸಿಸಿ ಕ್ಯಾಮೆರಾ ಪರಿಶೀಲಿಸಿದರೆ ಈ ದೌರ್ಜನ್ಯ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಯಬಹುದು ಎಂದು ಅಜಿತ್ ಹೇಳಿದ್ದಾರೆ. ಹಲ್ಲೆಗೊಳಗಾದ ಅಜಿತ್ ಇದೀಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪೊಲೀಸರ ಅಮಾನವೀಯತೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆ ನೀಡಬೇಕೆಂಬ ಕೂಗು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
PublicNext
19/01/2022 11:57 am