ಚಿಕ್ಕಮಗಳೂರು: ಮನೆಯ ಹಕ್ಕು ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಮತ್ತು ಗ್ರಾಮಲೆಕ್ಕಾಧಿಕಾರಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶೃಂಗೇರಿ ತಾಲೂಕು ತಹಶೀಲ್ದಾರ್ ಅಂಬುಜಾ ಮತ್ತು ಶೃಂಗೇರಿ ತಾಲೂಕು ಕಸಬಾ ಹೋಬಳಿ, ನಾಡ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಶೃಂಗೇರಿ ತಾಲೂಕಿನ ಕಾವಡಿ ಗ್ರಾಮದ ವ್ಯಕ್ತಿಯೊಬ್ಬರು ಬೆಳ್ಳಂದೂರು ಗ್ರಾಮದ ಕುಂಮ್ರಿಯಲ್ಲಿ ಮನೆ ನಿರ್ಮಿಸಿದ್ದರು. ಈ ಮನೆಯ ಹಕ್ಕು ಪತ್ರ ಪಡೆಯಲು ಶೃಂಗೇರಿ ತಾಲೂಕಿನ ಕಸಬಾ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಇವರು ಹಕ್ಕು ಪತ್ರ ಮಾಡಿಕೊಡುವಂತೆ ಶೃಂಗೇರಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿದ್ದರು. ಆಗ ತಹಶೀಲ್ದಾರ್ ಅವರು ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪನನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ಸಿದ್ದಪ್ಪನನ್ನು ಭೇಟಿ ಮಾಡಿದಾಗ ಹಕ್ಕು ಪತ್ರ ಮಾಡಿಕೊಡಲು 60 ಸಾವಿರ ರೂ. ನೀಡುವಂತೆ ಮೊದಲ ಕಂತಿನಲ್ಲಿ 30 ಸಾವಿರ ನೀಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಎಸಿಬಿ ಅಧಿಕಾರಿಗಳು ಮತ್ತು ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ 25 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಿದ್ದಪ್ಪನನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಬಳಿಕ ಅಂಬುಜಾ ಅವರನ್ನೂ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸಿಬಿ ತಿಳಿಸಿದೆ.
PublicNext
06/01/2022 10:47 pm