ಅಮೃತಸರ: ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಹತ್ಯೆಗೀಡಾದ ಘಟನೆ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ನಡೆದಿದೆ. ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಯುವಕನೊಬ್ಬ ಕಬ್ಬಿಣದ ಸರಪಳಿಯನ್ನು ದಾಟಿ ಗರ್ಭಗುಡಿ ಪ್ರವೇಶಿಸಿದ್ದಾನೆ. ಜೊತೆಗೆ ಸಿಖ್ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೀಬ್ ಬಳಿ ಇದ್ದ ಖಡ್ಗವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಕರ್ತವ್ಯನಿರತ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಕೊಠಡಿಗೆ ಎಳೆದೊಯ್ದು ವಿಚಾರಣೆ ನಡೆಸಿ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಗಂಭೀರವಾಗಿ ಹಲ್ಲೆಗೆ ಒಳಗಾದ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಎಲ್ಲಾ ದೃಶ್ಯಾವಳಿಗಳು ಪ್ರಾರ್ಥನೆಯು ನೇರ ಪ್ರಸಾರವಾಗ್ತಿದ್ದ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ. ಸದ್ಯ ಮೃತ ಪಟ್ಟ ವ್ಯಕ್ತಿ ಯಾರೆಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಹಾಗೆ ಪ್ರಕರಣದ ತನಿಖೆಯೂ ನಡೆಯುತ್ತಿದೆ.
PublicNext
19/12/2021 11:35 am