ಕಲಬುರಗಿ: ಅವರಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡ್ತಿದ್ರು. ಮನೆಯಲ್ಲಿ ಈ ಪ್ರೀತಿಗೆ ಒಪ್ಪಿಗೆಯೂ ಸಿಕ್ಕಿತ್ತು. ಆದ್ರೆ, ತಾನೊಂದು ಬಗೆದರೆ ವಿಧಿಯೊಂದು ಬಗೆದಿತ್ತು ಅನ್ನೋ ಹಾಗೆ, ಯುವಕ ಆಯತಪ್ಪಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ರೆ, ಮನನೊಂದ ಯುವತಿ ನೇಣಿಗೆ ಕೊರಳೊಡ್ಡಿ ತನ್ನ ಜೀವನ ಪಯಣ ಕೊನೆಗೊಳಿಸಿದ್ದಾಳೆ. ಕಲಬುರಗಿ ನಗರದ ಪಿಡಬ್ಲ್ಯೂಡಿ ಕ್ವಾಟರ್ಸ್ ನಿವಾಸಿ ಶೃತಿ (18) ಎಂಬಾಕೆ ಆತ್ಮಹತ್ಯೆಗೆ ಶರಣಾದ ಹುಡುಗಿ. ದ್ವಿತೀಯ ಪಿಯುಸಿ ಓದುತ್ತಿದ್ದ ಶೃತಿ, ಸಂಬಂಧಿಯಾದ ಬಸವನಬಾಗೇವಾಡಿ ನಿವಾಸಿ ಹನುಮಂತ ಎಂಬಾತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ಲು. ಹನುಮಂತ ಕೂಡ ಅಷ್ಟೇ ಪ್ರೀತಿ ಮಾಡುತ್ತಿದ್ದ. ಇಬ್ಬರೂ ತಮ್ಮ ಪೋಷಕರಿಗೆ ಪ್ರೀತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಪೋಷಕರು ಇವರ ಪ್ರೀತಿ ಮನ್ನಿಸಿ ಮದುವೆ ತಯಾರಿ ನಡೆಸಿದ್ರು. ಇದರ ಖುಷಿಯಲ್ಲಿ ಜೋಡಿ ಇರುವಾಗಲೇ ಹನುಮಂತ ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿದ್ದಾನೆ. ಕಳೆದ ಒಂದು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಹನುಮಂತ ಸಾವನ್ನಪ್ಪಿದ್ದ. ಜೀವಕ್ಕೆ ಜೀವವಾಗಿದ್ದ ಪ್ರಿಯತಮನ ಸಾವಿನಿಂದ ಶೃತಿಯ ಮನಸಿನಲ್ಲಿ ಶೋಕ ಮಡುಗಟ್ಟಿತ್ತು. ಇದರಿಂದ ನೊಂದ ಶೃತಿ ನೇಣಿಗೆ ಶರಣಾಗಿದ್ದಾಳೆ
ಇನ್ನೂ ಘಟನಾ ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ ಅಂತ ತಿಳಿಸಿದ್ದಾರೆ.
ಅದೆನೇ ಇರಲಿ ಬಾಳಿ ಬದುಕಬೇಕಾದ ಪ್ರೇಮಿಗಳಿಬ್ಬರ ದುರಂತ ಅಂತ್ಯ ಮನಕಲಕುವಂತೆ ಮಾಡಿದೆ.. ಒಟ್ಟಿನಲ್ಲಿ ಇರೋ ಒಬ್ಬ ಮಗಳನ್ನ ಸಂಬಂಧಿಕರ ಯುವಕನ ಜೊತೆ ಮಾಡಿಕೊಡುವ ಆಲೋಚನೆಯಲ್ಲಿದ್ದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ..
PublicNext
18/12/2021 09:08 am