ಬೆಂಗಳೂರು: ಕೇಂದ್ರ ಸರ್ಕಾರದ ಸರ್ವೇ ಇಲಾಖೆಯಲ್ಲಿ ಡೆಪ್ಯೂಟಿ ಡೆವಲಪ್‌ಮೆಂಟ್ ಕಮಿಷನರ್ ಹುದ್ದೆಯಲ್ಲಿರೋದಾಗಿ ಹೇಳಿಕೊಂಡು ಮುಗ್ಧ ಜನರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ವಂಚಿಸುತ್ತಿದ್ದ ಖತರ್‌ನಾಕ್ ವಂಚಕನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಮೂಲದ ರಾಘವ್ ಎಂಬಾತನೇ ಬಂಧಿತ ವಂಚಕನಾಗಿದ್ದಾನೆ. ಮುಗ್ಧ ನಿರುದ್ಯೋಗಿಗಳಿಂದ ಅಕ್ರಮವಾಗಿ ಹಣ ಪಡೆದು ವಾಸದ ಮನೆ, ಐಷಾರಾಮಿ ಕಾರುಗಳು, ಚಿನ್ನಾಭರಣ ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕುಂದಾಪುರ ನಿವಾಸಿಯಾಗಿರುವ ರಾಘವೇಂದ್ರ ಉಡುಪಿಯಲ್ಲಿ ಖಾಸಗಿಯಾಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡಲು ವಾಮಮಾರ್ಗ ಹಿಡಿದ ರಾಘವ್ ಗೆ, ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೇಂದ್ರ ಕಂದಾಯ ಇಲಾಖೆಯ ಡೆಪ್ಯೂಟಿ ಕಮೀಷನರ್ ಆಗಿ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ. ಜನರಲ್ಲಿ ತಾನು ಸರ್ಕಾರಿ ಉದ್ಯೋಗಿ ಎಂದು ನಂಬಿಸಲು ತನ್ನ ಕಾರಿನ ಮುಂದೆ ಭಾರತ ಸರ್ಕಾರ ಎಂದು ಬೋರ್ಡ್ ಹಾಕಿಕೊಂಡು ಸರ್ವೇ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ.
ಕೇಂದ್ರ ಸರ್ಕಾರ ಉನ್ನತ ಅಧಿಕಾರಿ ಸೋಗಿನಲ್ಲಿ ಐಷರಾಮಿ ಕಾರಿನಲ್ಲಿ ಒಡಾಡಿಕೊಂಡಿದ್ದ ವಂಚಕ ತಮ್ಮ ವಂಚನೆಯ ಕಾರ್ಯ ವ್ಯಾಪ್ತಿಯನ್ನು ಬೆಂಗಳೂರು, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ ಕಾರವಾರ ಸೇರಿ ಬಹುತೇಕ ಉತ್ತರ ಕರ್ನಾಟಕದ ಸರ್ಕಾರಿ ಕೆಲಸದ ಉದ್ಯೋಗಾಂಕ್ಷಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ತಾನು ಕೇಂದ್ರ ಸರ್ವೇ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದು ಸರ್ಕಾರಿ ಕೆಲಸ ಕೊಡಿಸುವುದಾಗಿ ಉದ್ಯೋಗಾಂಕ್ಷಿಗಳ ಪೋಷಕರಿಗೆ ನಂಬಿಸುತ್ತಿದ್ದ.
ವಿದ್ಯಾರ್ಹತೆ ಮೇರೆಗೆ ಕೆಲಸ ಕೊಡಿಸುವುದಾಗಿ ಹೇಳಿ ಒಬ್ಬರಿಂದ ಸುಮಾರು 20 ಲಕ್ಷ ಪಡೆಯುತ್ತಿದ್ದ. ನಾನಾ ಸಬೂಬು ಹೇಳಿ ಖಾಲಿ ಬಾಂಡ್ ಪೇಪರ್ ಹಾಗೂ ಚೆಕ್ ಗಳ ಮೇಲೆ ನಿರುದ್ಯೋಗಿಗಳ ಸಹಿ ಹಾಕಿಸಿಕೊಳ್ಳುತ್ತಿದ್ದ. ಬಳಿಕ ಹಣ ಪಡೆದು ಜನರನ್ನು ಯಾಮಾರಿಸುತ್ತಿದ್ದ. ಕೆಲಸ ಕೊಡಿಸದಿದ್ದಾಗ ಹಣ ಕೇಳಲು ಮುಂದಾದರೆ ಪ್ರಿಪ್ಲ್ಯಾನ್ ನಂತೆ ಸಹಿ ಹಾಕಿಸಿಕೊಂಡಿದ್ದ ಬಾಂಡ್ ಪತ್ರಗಳಲ್ಲಿ ತಾನೇ ಸಾಲ ನೀಡಿರುವುದಾಗಿ ಬರೆದುಕೊಳ್ಳುತ್ತಿದ್ದ.
ಸಹಿ ಹಾಕಲಾದ ಚೆಕ್ ನಲ್ಲಿ ಇಂತಿಷ್ಟು ಹಣ ನೀಡಿರುವುದಾಗಿ ನಮೂದಿಸಿದ್ದ. ಈ ಮೂಲಕ ಕಾನೂನು ದೃಷ್ಟಿಯಿಂದ ತಾನೊಬ್ಬ ಸಂತ್ರಸ್ತ ಎಂದು ಬಿಂಬಿಸಿಕೊಂಡು ನ್ಯಾಯಾಲಯದಲ್ಲಿ ಉದ್ಯೋಗಾಂಕ್ಷಿಗಳ ವಿರುದ್ಧವೇ ಚೆಕ್ ಬೌನ್ಸ್ ಕೇಸ್ ಹಾಕಿ ಬೆದರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ಮಡದಿಯರ ಮುದ್ದಿನ ಗಂಡ ಆರೋಪಿ ರಾಘವೇಂದ್ರ..
ನಗರದ ಜೆ.ಪಿ.ನಗರದಲ್ಲಿ ವಾಸವಾಗಿದ್ದ ರಾಘವ್ ಗೆ ಹಾವೇರಿ, ಬಾಗಲಕೋಟೆ, ಬೆಂಗಳೂರು ಮತ್ತು ಕುಂದಾಪುರದಲ್ಲಿ ನಾಲ್ವರು ಮಹಿಳೆಯರೊಂದಿಗೆ ಮದುವೆ ಮಾಡಿಕೊಂಡಿದ್ದ. ನಿರುದ್ಯೋಗಳಿಂದ ಪಡೆದ ಹಣದಿಂದ ಕಾರು, ಊರಿನಲ್ಲಿ ಮನೆ, ತುಮಕೂರಿನಲ್ಲಿ ಹೋಟೆಲ್, ಕೆಂಗೇರಿಯಲ್ಲಿ ಪ್ಲಾಟ್ ಹಾಗೂ ಲಕ್ಷಾಂತರ ರೂಪಾಯಿ ಚಿನ್ನಾಭರಣ ಖರೀದಿಸಿದ್ದ. ಸದ್ಯ ಆತನನ್ನು ಬಂಧಿಸಿ ನಕಲಿ ಗುರುತಿನ ಚೀಟಿ, ಮೊಬೈಲ್ ಪೋನ್, ಟ್ಯಾಬ್, ಲ್ಯಾಪ್ ಟಾಪ್, ಚೆಕ್ ಹಾಗೂ ಬಾಂಡ್ ಪೇಪರ್ ಹಾಗೂ ಖರೀದಿಸಿದ್ದ ಆಸ್ತಿ ಪತ್ರಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಎಸಿಪಿ ಹೆಚ್.ಎನ್.ಧರ್ಮೇಂದ್ರ ಹಾಗೂ ಇನ್ ಸ್ಪೆಕ್ಟರ್ ಎಂ.ಎಂ ಭರತ್ ನೇತೃತ್ವದಲ್ಲಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
27/11/2021 06:02 pm