ಮಂಗಳೂರು: ದ.ಕ. ಜಿಲ್ಲೆಯ ಕುಷ್ಠರೋಗ ನಿವಾರಣಾಧಿಕಾರಿ ಡಾ.ರತ್ನಾಕರ್ ತನ್ನ ಕಚೇರಿಯ ಮಹಿಳಾ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡಿರುವ ಫೋಟೊ, ವೀಡಿಯೋ ವೈರಲ್ ಆಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಫೋಟೊ, ವೀಡಿಯೊದಲ್ಲಿರೋದು ಆತನೆಂದೇ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತನನ್ನು ಅಮಾನತು ಮಾಡಿ ಆರೋಗ್ಯ ಇಲಾಖೆ ಆದೇಶಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಈತ ಕಚೇರಿಯ 9 ಮಹಿಳಾ ಸಿಬ್ಬಂದಿಯೊಂದಿಗೆ ಚೆಲ್ಲಾಟವಾಡಿರೋದು ಬಯಲಾಗಿದೆ. ವೈದ್ಯಾಧಿಕಾರಿ ಡಾ.ರತ್ನಾಕರ್ ಅನುಚಿತ ವರ್ತನೆ, ಕಾಮದಾಟದ ಬಗ್ಗೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗೆ ಆಗಸ್ಟ್ ತಿಂಗಳಲ್ಲೇ ದೂರು ಕೇಳಿ ಬಂದಿತ್ತು. ಈ ಬಗ್ಗೆ ಹಿರಿಯ ಆರೋಗ್ಯ ಅಧಿಕಾರಿಯೋರ್ವರ ಆಂತರಿಕ ದೂರು ಸಮಿತಿಯಲ್ಲಿ ತನಿಖೆ ನಡೆದಿತ್ತು. ಪ್ರಾಥಮಿಕ ತನಿಖೆಯಲ್ಲಿ ಈತ ಅನುಚಿತವಾಗಿ ವರ್ತಿಸಿರೋದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಶಿಸ್ತು ಕ್ರಮಕ್ಕೆ ಕಳುಹಿಸಲಾಗಿತ್ತು. ಅದರಂತೆ ನ.8ರಂದು ರಾಜ್ಯ ಆರೋಗ್ಯ ಇಲಾಖೆ ಡಾ.ರತ್ನಾಕರ್ ನನ್ನು ಅಮಾನತು ಮಾಡಿ ಆದೇಶಿಸಿದೆ.
ಕಚೇರಿಯಲ್ಲಿ ಈತ ಸಾಕಷ್ಟು ಮಹಿಳಾ ಸಿಬ್ಬಂದಿಯನ್ನು ತನ್ನ ಕಾಮದಾಟಕ್ಕೆ ಬಳಸುತ್ತಿದ್ದ. ಈ ಬಗ್ಗೆ ಸಹಕರಿಸದ ಸಿಬ್ಬಂದಿಗೆ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲ ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಅಲ್ಲದೆ, ಈ ಬಗ್ಗೆ ಸಾಕಷ್ಟು ಅನಾಮಧೇಯ ಕರೆಗಳು ಬಂದಿತ್ತು. ಅಲ್ಲದೆ, ಆತ ಆಸ್ಪತ್ರೆಯ ಬಿಲ್ ವಿಚಾರದಲ್ಲೂ ಅಕ್ರಮ ಎಸಗಿರುವುದು ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿ.ಸಿ. ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
PublicNext
26/11/2021 07:49 pm