ಬೆಂಗಳೂರು: ಬೆಂಗಳೂರಿನ ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ನ ವಿಜಯನಗರ, ಅಂಬೇಡ್ಕರ್ ನಗರ ಹಾಗೂ ಗಾಂಧಿಪುರ ಈ ಮೂರು ಗ್ರಾಮಗಳಿಗೆ ಸೇರಿದ ರುದ್ರಭೂಮಿಯಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವೈಟ್ ಫೀಲ್ಡ್ ಮುರುಗೇಶ್ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹೋಬಳಿಯ ವಿಜಯನಗರ, ಅಂಬೇಡ್ಕರ್‌ನಗರ ಹಾಗೂ ಗಾಂಧಿಪುರ ಈ ಗ್ರಾಮಗಳಿಗೆ ಸೇರಿದ ರುದ್ರಭೂಮಿಯಲ್ಲಿ ಈಗಾಗಲೇ ನಾಲ್ಕೈದು ಮನೆಗಳು ನಿರ್ಮಾಣವಾಗಿದೆ. ಇದರಲ್ಲಿ ಅಂಗನವಾಡಿ ಕೇಂದ್ರವೂ ಇದ್ದು, ಇದರಿಂದ ಮುಂದಿನ ದಿನಗಳಲ್ಲಿ ರುದ್ರಭೂಮಿಗೆ ಸ್ಥಳ ಇಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವತಿಯಿಂದ ರುದ್ರಭೂಮಿಗೆ ಕಾಂಪೌಂಡ್ ಹಾಕಲು ಮಂಜೂರಾತಿ ಸಿಕ್ಕಿದ್ದು, ಸರ್ವೇ ಕೂಡ ನಡೆದಿದೆ. ಈಗ ರುದ್ರಭೂಮಿಯಲ್ಲಿ ಮನೆಗಳು ಇರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಕೆಲ ಯುವಕರು ಗಾಂಜಾ- ಅಫೀಮು, ಮದ್ಯ ಸೇವಿಸಿ ಪರಿಸರ ಹಾಳು ಮಾಡುವುದಲ್ಲದೆ, ಇಲ್ಲಿ ಅಕ್ರಮ ಚಟುವಟಿಕೆ ಸಹ ನಡೆಯುತ್ತಿರುವ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಕೂಡಲೇ ಸ್ಥಳ ಪರಿಶೀಲನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಈ ರುದ್ರಭೂಮಿಯಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸಿ ಅನುಕೂಲ ಮಾಡಿ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
PublicNext
22/11/2021 03:29 pm