ಬೆಂಗಳೂರು: ನೆಚ್ಚಿನ ನಾಯಕ ಪುನೀತ ಸಾವನ್ನಪ್ಪಿದ ಸುದ್ದಿಯಿಂದ ಇಡೀ ಕರುನಾಡು ಕಣ್ಣೀರು ಹಾಕುತ್ತಿದೆ. ಇದರ ಮಧ್ಯೆ ಕೆಲ ಅಭಿಮಾನಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ನೋವಿನ ಸಂಗತಿ.ಸದ್ಯ ಕರುನಾಡಿನ ವಿವಿಧೆಡೆ ನಡೆದ ಪ್ರತ್ಯೇಕ ಪ್ರಕರಣದಲ್ಲಿ ನಟ ಪುನೀತ್ ಸಾವಿನಿಂದ ಮನನೊಂದು ಅವರ ಇಬ್ಬರು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದರೆ, ಮೂವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪುನೀತ್ ನಿಧನದ ಸುದ್ದಿ ಕೇಳಿ ಶುಕ್ರವಾರದಿಂದ ಅಳುತ್ತಾ ಕುಳಿತಿದ್ದ ಚಿಕ್ಕಮಗಳೂರು ನಗರ ರಾಂಪುರದ ಶರತ್ (30)ಗೆ ಮನೆಯವರು ಸಮಾಧಾನ ಹೇಳಿದ್ದರು.ನಂತರ ಏಕಾಏಕಿ ರೂಮಿಗೆ ಹೋದ ಶರತ್ ನೇಣಿಗೆ ಶರಣಾಗಿದ್ದಾನೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಯುವಕ ರಾಹುಲ್ ಗಾಡಿವಡ್ಡರ (22) ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿಯ ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಎಂಬ ಯುವಕ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.
ಅಪ್ಪುವಿನ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಇವರು ಆಘಾತಗೊಂಡು ಮೃತಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಜ್ಞಾನಮೂರ್ತಿ ನಿಂಗಾಪುರ(40) ಹೃದಯಾಘಾತದಿಂದ ಸಾವನ್ನಪಿದ್ದಾನೆ. ಅಪ್ಪು ಸಾವಿನ ಸುದ್ದಿ ತಿಳಿದು ತೀವ್ರ ನೊಂದಿದ್ದ ಅವರು ಎದೆನೋವಿನಿಂದ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಭಾರತೀನಗರ ಸಮೀಪದ ಯಲಾದಹಳ್ಳಿ ಗ್ರಾಮದ ಸುರೇಶ್(46) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ದೇವರಹಿಪ್ಪರಗಿ ಪಟ್ಟಣದ ಶರಣಪ್ಪ ಅಮೋಘಿ ಬಿಸನಾಳ (24) ಆತ್ಮಹತ್ಯೆಗೆ ಯತ್ನಿಸಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗಣೇಶ್ ಕುಮಾರ್ (22)ಬ್ಲೇಡ್ ನಿಂದ ಕೈ ಹಾಗೂ ಎದೆ ಭಾಗ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
31/10/2021 11:47 am