ದಾವಣಗೆರೆ: ನ್ಯಾಮತಿ ತಾಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಚನ್ನೇಶಪ್ಪ ತನ್ನ ಪತ್ನಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಪ್ರಕರಣ ಸಂಬಂಧ ಇನ್ನು ಯಾವುದೇ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಈ ಬಗ್ಗೆ ತಪ್ಪಾಗಿ ಕೆಲವೆಡೆ ವರದಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 36 ವರ್ಷದ ಶಿಲ್ಪಾ ಅವರನ್ನು ಓವರ್ ಡೋಸ್ ನೀಡಿ ಸಾಯಿಸಲಾಗಿದೆ ಎಂದು ಆಕೆ ತಂದೆ ಚಂದ್ರಪ್ಪ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಚಾರ್ಜ್ ಶೀಟ್ ಸಲ್ಲಿಸುವುದು ಇನ್ನು ಬಾಕಿ ಇದೆ. ತನಿಖೆಯ ದೃಷ್ಟಿಯಿಂದ ಫೊರೆನ್ಸಿಕ್ ಹಾಗೂ ಎಫ್ ಎಸ್ ಎಲ್ ವರದಿಯ ಮಾಹಿತಿ ಬಹಿರಂಗಪಡಿಸಲಾಗದು. ತನಿಖೆ ಮುಂದುವರಿದಿದ್ದು, ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ತನ್ನ ಪತ್ನಿಗೆ ನ್ಯಾಮತಿ ತಾಲೂಕಿನ ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಚನ್ನೇಶಪ್ಪ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆದ್ರೆ, ಇದುವರೆಗೆ ಯಾವುದೇ ಚಾರ್ಜ್ ಶೀಟ್ ಸಲ್ಲಿಸಿಲ್ಲ ಎಂದು ಮಾಹಿತಿ ನೀಡಿದರು.
ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದ ಚನ್ನೇಶಪ್ಪನು ಹದಿನೆಂಟು ವರ್ಷಗಳ ಹಿಂದೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಶಿಲ್ಪಾಳ ಜೊತೆ ವಿವಾಹವಾಗಿತ್ತು. ಮದುವೆ ವೇಳೆ 700 ಗ್ರಾಂ ಬಂಗಾರ, 1 ಕೆ ಜಿ ಬೆಳ್ಳಿ, 7 ಲಕ್ಷ ನಗದು ಅನ್ನು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು. ಮಾತ್ರವಲ್ಲ, ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ ಚನ್ನೇಶಪ್ಪ ಜೂಜಾಟ, ಮಾಟ, ಮಂತ್ರ, ವಾಮಾಚಾರ ಹಾಗೂ ಕುಡಿತದ ದಾಸನಾಗಿದ್ದ. ಇದಕ್ಕೆ ಕುಟುಂಬದಲ್ಲಿ ಆಗಾಗ್ಗೆ ಜಗಳ ಆಗುತಿತ್ತು.
ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಚನ್ನೇಶಪ್ಪ ಕಳೆದ ಒಂಬತ್ತು ತಿಂಗಳ ಹಿಂದೆ ತನ್ನ ಚಾಣಾಕ್ಷತನ ಬಳಸಿ ಶಿಲ್ಪಾಳ ಕಥೆ ಮುಗಿಸಿದ್ದ. 2021ರ ಫೆಬ್ರವರಿ 11ರಂದು ಪತಿ ಶಿಲ್ಪಾಳಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ್ದ. ಶಿಲ್ಪಾಳ ಪೋಷಕರಿಗೆ ಫೋನ್ ಮಾಡಿ ಶಿಲ್ಪಾ ಸಾವನ್ನಪ್ಪಿದ್ದಾಳೆ ಬನ್ನಿ ಎಂದು ಚನ್ನೇಶಪ್ಪ ಫೋನ್ ನಲ್ಲಿ ಮಾಹಿತಿ ತಿಳಿಸಿದ್ದ. ಈ ವೇಳೆ ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಶಿಲ್ಪಾಳ ಭುಜದ ಮೇಲೆ ಇಂಜೆಕ್ಷನ್ ನಿಂದ ಚುಚ್ಚಿದ ಗುರುತು ಕಂಡು ಬಂತು. ಆಗ ಚನ್ನೇಶಪ್ಪನು ಶಿಲ್ಪಾಳಿಗೆ ಲೋ ಬಿಪಿ ಆಗಿತ್ತು. ಹಾಗಾಗಿ ನಾನೇ ಇಂಜೆಕ್ಷನ್ ಕೊಟ್ಟೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದ. ಆತನೇ ಕೊಲೆ ಮಾಡಿದ್ದು, ಸೂಕ್ತ ತನಿಖೆ ನಡೆಸುವಂತೆ ಶಿಲ್ಪಾಳ ತಂದೆ ಚಂದ್ರಪ್ಪ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
PublicNext
27/10/2021 06:37 pm