ಬೆಂಗಳೂರು: ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಪೊಲೀಸ್ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದ ಆರೋಪಿ ಚಾಲಕ ರಾಮಾಂಜುಲು ಎಂಬಾತನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿನ್ನೆ ಶನಿವಾರ ತಡರಾತ್ರಿ ಬೆಂಗಳೂರಿನ ಎಚ್‌ಎಎಲ್ ಮುಖ್ಯ ರಸ್ತೆಯಲ್ಲಿ ಏರ್ಪೋರ್ಟ್ ಟ್ರಾಫಿಕ್ ಪೊಲೀಸರು ಡ್ರಂಕ್ & ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಯಮಲೂರು ಕಡೆಯಿಂದ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಆರೋಪಿ ರಾಮಾಂಜುಲುಗೆ ಹೆಡ್ ಕಾನ್ಸ್‌ಟೆಬಲ್ ಮುಬಾರಕ್ ಅಲಿ ಕಾರು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಕಾರು ನಿಲ್ಲಿಸಲು ಇಚ್ಛಿಸದ ರಾಮಾಂಜುಲು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ನಾನು ಯಾರು ಗೊತ್ತಾ? ನನ್ನ ಕಾರು ತಡೆಯಲು ನಿನಗ್ಯಾರು ಹೇಳಿದ್ದು? ಎಂದು ಪ್ರಶ್ನಿಸುತ್ತ ಮುಂದೆ ನಿಂತಿದ್ದ ಹೆಡ್ ಕಾನ್ಸ್ಟೇಬಲ್ ಮುಬಾರಕ್‌ಗೆ ಕಾರು ಗುದ್ದಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಗುಂಡು ಗಿರಾಕಿ ರಾಮಾಂಜುಲುನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಹೆಡ್ ಕಾನ್ಸ್‌ಟೆಬಲ್ ಮುಬಾರಕ್ ಅಲಿಅವರ ಎಡಗಾಲಿನ ಮಂಡಿ, ಮೊಣಕಾಲಿಗೆ ಗಾಯವಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ರಾಮಾಂಜುಲು ಮೇಲೆ ಐಪಿಸಿ ಸೆಕ್ಷನ್ 353, 307, 427, 279 ಅಡಿ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಕೇಸ್ ದಾಖಲಿಸಲಾಗಿದೆ.
PublicNext
24/10/2021 07:01 pm