ಬೆಂಗಳೂರು: ಬೆಂಗಳೂರಿನಲ್ಲಿ ಬಗೆದಷ್ಟು ಮಾದಕ ವಸ್ತುಗಳ ಸಾಗಾಣಿಕೆ, ಸೇವನೆ ಪ್ರಕರಣಗಳು ಹೊರ ಬೀಳುತ್ತಿವೆ. ಈ ಬಾರಿ ಸಿಸಿಬಿ ಪೊಲೀಸರು, ಕೋರ್ಟ್ ದಾಖಲೆಯೆಂದು ಸ್ಪೀಡ್ ಪೋಸ್ಟ್‌ನಲ್ಲಿ ಮಾದಕ ವಸ್ತು ರವಾನೆ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.
ಜಾರ್ಖಂಡ್ ಮೂಲದ ರವಿಕುಮಾರ್ ಮತ್ತು ಪ್ರಕಾಶ್ ರವಿರಾಜ್ ಬಂಧಿತ ಆರೋಪಿಗಳು. ಬೆಳ್ಳಂದೂರಿನ ಪಿ.ಜಿ.ಯಲ್ಲಿದ್ದಾಗ ಸಿಸಿಬಿ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ.
ಡಾರ್ಕ್ ವೆಬ್ ಮಾದಕ ಜಾಲದ ಮೂಲಕ ಮಾದಕ ವಸ್ತುಗಳು ದೇಶದೊಳಕ್ಕೆ ಎಂಟ್ರಿ ಆಗುತ್ತಿರುವುದು ಮತ್ತೊಮ್ಮೆ ದೃಢಪಟ್ಟಿದೆ. ದೇಶದೊಳಕ್ಕೆ ಬಂದ ಮೇಲೆ ಬಿಟ್ ಕಾಯಿನ್ ಮೂಲಕ ಸ್ಥಳೀಯ ಪೆಡ್ಲರ್‌ಗಳಿಂದ ಮಾದಕ ವಸ್ತುಗಳು ಖರೀದಿ ಆಗುತ್ತಿವೆ. ಅಡ್ವೊಕೇಟ್ ಓರ್ವರ ಹೆಸರಿನಲ್ಲಿ ಕಳುಹಿಸಲಾಗುತ್ತಿದ್ದ ಪುಸ್ತಕವನ್ನು ಕೊರ್ಟ್ ದಾಖಲೆಯೆಂದು ಸ್ಪೀಡ್ ಪೋಸ್ಟ್ ಮೇಲೆ ಉಲ್ಲೇಖ ಮಾಡಲಾಗಿತ್ತು. ಹೀಗಾಗಿ ಅದನ್ನು ಯಾರು ಸಹ ಮುಟ್ಟುತ್ತಿರಲಿಲ್ಲ ಎಂದು ಕೃತ್ಯ ಬಯಲಿಗೆಳೆದ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಕುಳಿತ ಕಿಂಗ್‌ಪಿನ್‌ನಿಂದ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ತನ್ನ ಯುವಕರನ್ನು ಬಿಟ್ಟು ಡ್ರಗ್ಸ್ ದಂಧೆ ಮಾಡುತ್ತಿದ್ದ. ಬೆಳ್ಳಂದೂರಿನ ಪಿಜಿಯಲ್ಲಿ ವಾಸವಿದ್ದ ಆರೋಪಿಗಳು ಎಂಡಿಎಂಎ, ಎಕ್ಸ್‌ಟಸಿ, ಎಲ್‌ಎಸ್‌ಡಿ, ಚರಸ್, ಹೈಡ್ರೋ ಗಾಂಜಾ ಶೇಖರಿಸಿಟ್ಟುಕೊಂಡಿದ್ದರು.
ದೆಹಲಿಯಲ್ಲಿರುವ ಸೂತ್ರಧಾರಿ ವ್ಯಕ್ತಿ Wickr-Me ಮೂಲಕ ಆರ್ಡರ್ ಪಡೆಯುತ್ತಿದ್ದ. ಬಳಿಕ ಆತನ ಸೂಚನೆ ಮೇರೆಗೆ ಆರೋಪಿಗಳಿಂದ ಡ್ರಗ್ಸ್ ಡೆಲಿವರಿಯಾಗುತ್ತಿತ್ತು. ಆರೋಪಿಗಳು ಸ್ವಿಗ್ಗಿ, ಜಿನಿ, ಡೊನ್ಜೋ ಜಾಕೇಟ್ ಧರಿಸಿ ಗ್ರಾಹಕರಿಗೆ ಡ್ರಗ್ಸ್ ತಲುಪಿಸುತ್ತಿದ್ದರು. ಪುಸ್ತಕದ ಮೂಲಕ ಪಿಜಿಗೆ ಬರುತ್ತಿದ್ದ ಮಾದಕ ವಸ್ತುಗಳು ಅಲ್ಲಿಂದ ಮುಂದಕ್ಕೆ ಸೋಪ್, ಫೋಟೋ, ಗ್ರೀಟಿಂಗ್ ಕಾರ್ಡ್, ಇತರೆ ಪುಸ್ತಕಗಳ ಪುಟಗಳ ಮಧ್ಯೆ, ಗಿಫ್ಟ್ ಕವರ್ ಆಗಿ ರವಾನೆಯಾಗುತ್ತಿತ್ತು.
ಸಿಸಿಬಿ ಪೊಲೀಸರು ಬಂಧಿತರಿಂದ 66 ಲಕ್ಷ ರೂ. ಮೌಲ್ಯದ 300 ಎಂಡಿಎಂಎ ಎಕ್ಸೆಟೆಸಿ ಮಾತ್ರೆ, 100 ಎಲ್ ಎಸ್ ಡಿ, 350 ಗ್ರಾಂ ಚರಸ್, 1.5 ಕೆಜಿ ಹೈಡ್ರೋ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸುತಿದ್ದ ಗಿಫ್ಟ್ ಪ್ಯಾಕ್ಸ್, ಸ್ವಿಗೀ ಕಂಪನಿಯ ಟೀ ಶರ್ಟ್‌ಗಳು, ಡಂಝೋ ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಗಮನಾರ್ಹವೆಂದರೆ ಆರೋಪಿಗಳು ಸ್ವಿಗೀಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಆದರೆ ಸ್ವಿಗೀ ಟೀ ಶರ್ಟ್ ಬಳಸಿ, ಕುಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
PublicNext
22/10/2021 02:05 pm