ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, 3 ಗಂಟೆಯ ಅವಧಿಯಲ್ಲಿ ಓರ್ವ ರಸಾಯನಶಾಸ್ತ್ರಜ್ಞ ಸೇರಿ ಮೂವರು ನಾಗರಿಕರನ್ನು ಹತ್ಯೆ ಮಾಡಿದ್ದಾರೆ.
ಶ್ರೀನಗರದ ಹೊರವಲಯ ಹವಾಲ್ ಮದಿನ್ ಸಾಹಿಬ್ ಬಳಿ ಈ ಉಗ್ರರ ದಾಳಿ ನಡೆದಿದ್ದು, ರಕ್ಷಣಾಪಡೆಗಳು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ಮೊದಲ ದಾಳಿಯಲ್ಲಿ ರಸಾಯನಶಾಸ್ತ್ರಜ್ಞ ಪಂಡಿತ್ ಮಖಾನ್ ಲಾಲ್ ಬಿಂದ್ರೂ ಸಾವನ್ನಪ್ಪಿದ್ದಾರೆ. ಅವರು ಶ್ರೀನಗರದ ಇಕ್ಬಾಲ್ ಪಾರ್ಕ್ ಪ್ರದೇಶದಲ್ಲಿ ಬಿಂದ್ರೂ ಮೆಡಿಕೇಟ್ಸ್ ಎಂಬ ಕಚೇರಿ ಇಟ್ಟುಕೊಂಡಿದ್ದರು. ಮಂಗಳವಾರ ಸಂಜೆ 7:20ಕ್ಕೆ ಇವರ ಮೇಲೆ ಗುಂಡು ಹಾರಿಸಿರುವ ಉಗ್ರರು ಬಳಿಕ ಪರಾರಿಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಾರ್ವಜನಿಕರು ಮುಂದಾದರೂ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಶ್ರೀನಗರದ ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಸಂಜೆ 8 ಗಂಟೆ ವೇಳೆಗೆ ಉಗ್ರರು ಎರಡನೇ ದಾಳಿ ನಡೆಸಿದ್ದಾರೆ. ಈ ವೇಳೆ ಬಿಹಾರ ಬಾಗಲ್ಪುರ ಜಿಲ್ಲೆಯ ಮೂಲದ ವಿರೇಂದ್ರ ಪಾಸ್ವಾನ್ ಎಂಬುವವರ ಮೇಲೆ ಉಗ್ರರು ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಮೂರನೇ ದಾಳಿ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ. ಶಹಗುಂದ್ ಪ್ರದೇಶದ ವ್ಯಕ್ತಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದು, ಆತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
PublicNext
06/10/2021 09:57 am