ಬೆಂಗಳೂರು: ಕೇವಲ 17 ವರ್ಷ ವಯಸ್ಸಿನ ವಿದ್ಯಾರ್ಥಿ ತನ್ನ ತಂದೆಯ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಾನಸಿಕ ಒತ್ತಡದಿಂದ ಈ ಆತ್ಮಹತ್ಯೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆದ್ರೆ ಘಟನೆಗೆ ನೈಜ ಕಾರಣ ಪೊಲೀಸರ ತನಿಖೆ ನಂತರ ತಿಳಿದು ಬರಲಿದೆ.
ಮೃತನನ್ನು ಆರ್ಮಿ ಸ್ಕೂಲ್ ನ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಎಂದು ಗುರುತಿಸಲಾಗಿದೆ. ಬೆಳಗಿನಜಾವ 5:45ರ ಸುಮಾರಿಗೆ ಘಟನೆ ನಡೆದಿದೆ. ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆಯ ಎಡಭಾಗಕ್ಕೆ ಗುಂಡು ಬಿದ್ದಿದ್ದು, ಬುಲೆಟ್ ಕೂಡ ಮೃತನ 6 ಅಡಿ ಅಂತರದಲ್ಲಿ ಬಿದ್ದಿದೆ. ತಂದೆಗೆ ಸೇರಿದ ಪರವಾನಗಿ ಇರುವ ಪಿಸ್ತೂಲ್‍ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾಹುಲ್ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ. ಸದ್ಯ ಪೊಲೀಸರು ಘಟನಾ ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ. ಮಗನ ಶವ ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
17/09/2021 09:27 am