ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೆಸ್, ಪೊಲೀಸ್ ಆಯುಕ್ತರ ಹೆಸರು ಬಳಸಿ 42 ಬಾರಿ ಸಂಚಾರ ನಿಯಮ ಉಲ್ಲಂಘನೆ: ಕೊನೆಗೂ ಸಿಕ್ಕಿಬಿದ್ದ ಆಸಾಮಿ

ಬೆಂಗಳೂರು: ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇಗೌಡ ಅವರ ಅಭಿಮಾನಿ ಎಂದು ಬೈಕ್ ಮೇಲೆ ಹೆಸರು ಹಾಗೂ ಪ್ರೆಸ್ ಅಂತೆಲ್ಲ ಮುದ್ರಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಜಯನಗರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡಿದ್ದಾರೆ.

ತ್ಯಾಗರಾಜ ನಗರದ ನಿವಾಸಿ ಪಿ.ಗಿರೀಶ್ ಬಾಬು (58) ಎಂಬುವರ ಬೈಕ್ ಜಪ್ತಿ ಮಾಡಲಾಗಿದೆ. ಈತ ಈವರೆಗೂ 42 ಸಂಚಾರ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. 20,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪಿ. ಗಿರೀಶ್ ​ಬಾಬು KA 05 JS 2581 ನಂಬರ್​ನ ತನ್ನ ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​ ಮೇಲೆ ಪ್ರೆಸ್ ಎಂದು ಬರೆಸಿಕೊಂಡಿದ್ದ. ಅಲ್ಲದೆ ವಾಹನದ ಮೇಲೆ ರವಿಕಾಂತೇಗೌಡರ ಹೆಸರು ಬರೆಸಿಕೊಂಡಿದ್ದಲ್ಲದೆ, ಆರ್​ಟಿಐ ಕಾರ್ಯಕರ್ತ ಎಂದೂ ಹೇಳಿಕೊಂಡು ತಿರುಗುತ್ತಿದ್ದ. ಹೀಗೆ ಈತ 42 ಸಾಲ ಸಂಚಾರ ನಿಯಮ ಉಲ್ಲಂಘಿಸಿ, 20,200 ರೂ. ದಂಡ ಪಾವತಿಸಬೇಕಿತ್ತು. ಅದಾಗ್ಯೂ ಹೀಗೆಲ್ಲ ಪೋಸ್ ಕೊಟ್ಟು ಕೊಂಡು ಈತ ತಿರುಗುತ್ತಿದ್ದ ಕುರಿತ ಫೋಟೋಗಳು ವೈರಲ್ ಆಗಿದ್ದವು.

ಈ ಬಗ್ಗೆ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯಕ್ತ ಡಾ. ಬಿ ಆರ್ ರವಿಕಾಂತೇಗೌಡ ಆರೋಪಿಯ ಪತ್ತೆಗಾಗಿ ಜಯನಗರ ಸಂಚಾರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಪಿ ಎನ್ ಈಶ್ವರಿ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಸೂಚಿಸಿದ್ದರು.

ಈ ತಂಡ ಆರೋಪಿಯನ್ನು ಪತ್ತೆ ಮಾಡಿ, ವಾಹನ ವಶಕ್ಕೆ ಪಡೆದಿದೆ. ಯಾರಾದರೂ ಹೀಗೆ ಪೊಲೀಸ್ ಅಧಿಕಾರಿಗಳ ಅಥವಾ ಮಾಧ್ಯಮದ ಹೆಸರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದಲ್ಲಿ ಸಂಬಂಧಪಟ್ಟ ಠಾಣೆಗೆ ತಿಳಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

11/09/2021 09:43 pm

Cinque Terre

61.37 K

Cinque Terre

1