ತುಮಕೂರು: 65 ವರ್ಷದ ವೃದ್ಧನೋರ್ವ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಈ ಘಟನೆಯು ಆಗಸ್ಟ್ 23ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ವೃದ್ಧ ಲಿಂಗಣ್ಣ(65) ಎಂಬಾತ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ಆರೋಪಿಸಿ, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿಯ ಪೋಷಕರು ಆಗಸ್ಟ್ 23ರಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಮನೆಗೆ ಹೋಗಿ ಟೀ ಮಾಡಿಕೊಂಡು ಬಾ ಎಂದು ಬಾಲಕಿಯನ್ನು ಪೋಷಕರು ಕಳುಹಿಸಿದ್ದರು. ಅದರಂತೆ ಬಾಲಕಿ ಮನೆಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿ, ಬಳಿಕ ಮನೆಗೆ ನುಗ್ಗಿ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಘಟನೆ ನಡೆದು ಮೂರು ದಿನಗಳ ನಂತರ ಬಾಲಕಿ ತನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ ಎಂದು ಸಂತ್ರಸ್ತೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
PublicNext
04/09/2021 05:47 pm