ಬೆಂಗಳೂರು: ದಿನಗಳು ಕಳೆದಂತೆ ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆಯ ಕರಾಳ ರೂಪ ಬಯಲಿಗೆ ಬರುತ್ತಿದೆ. ಈ ಪ್ರಕರಣದ ಆರೋಪಿ ನಟಿ ಸಂಜನಾ ಗಲ್ರಾನಿ ಮತ್ತೋರ್ವ ಆರೋಪಿ ರಾಹುಲ್ ತೋನ್ಸೆ ಜೊತೆಗೆ ತಮ್ಮ ಮನೆಯಲ್ಲೇ ಹಲವು ಬಾರಿ ಆಹ್ವಾನಿಸಿ ಜೊತೆಯಲ್ಲೇ 'ಆಫ್ಟರ್ ಪಾರ್ಟಿ' (ಆಪ್ತರನ್ನಷ್ಟೇ ಸೇರಿಸಿಕೊಂಡು ಮಾಡುತ್ತಿದ್ದ ಪಾರ್ಟಿ) ನಡೆಸಿ ಡ್ರಗ್ಸ್ ಸೇವಿಸಿದ್ದಳು ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.
ಹೌದು. ವಿದೇಶಗಳಲ್ಲಿರುವ ಕ್ಯಾಸಿನೊ ಮತ್ತು ಕ್ಲಬ್‌ಗಳಿಗೆ ಗ್ರಾಹಕರನ್ನು ಕರೆದೊಯ್ಯುವ ಮಧ್ಯವರ್ತಿಯಾಗಿದ್ದ ಆರೋಪಿ ರಾಹುಲ್ ತೋನ್ಸೆ, ಮದುವೆ ನೆಪದಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಡ್ರಗ್ಸ್ ಜಾಲಕ್ಕೆ ದೂಡುತ್ತಿದ್ದ. ಆತನನ್ನು ನಟಿ ಸಂಜನಾ ಗಲ್ರಾನಿ 'ರಾಕಿ ಭಾಯಿ' ಎನ್ನುತ್ತಿದ್ದರಂತೆ.
ಮಾದಕ ವಸ್ತು (ಡ್ರಗ್ಸ್) ಸೇವಿಸಲು ಹಾಗೂ ಮಾರಾಟದಿಂದ ಹಣ ಗಳಿಸಲು ಸಂಘಟಿತರಾಗಿದ್ದ ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದ ಆರೋಪಿಗಳು, ಯುವಜನರನ್ನು ತೆಕ್ಕೆಗೆ ಬೀಳಿಸಿಕೊಂಡು ನಶೆ ಏರಿಸಿಕೊಳ್ಳಲು ಪ್ರಚೋದಿಸುತ್ತಿದ್ದರು. ಪ್ರಕರಣದಲ್ಲಿ 25 ಆರೋಪಿಗಳ ಪಾತ್ರ ಕುರಿತು ಸಿಸಿಬಿ ಪೊಲೀಸರು, ದೋಷಾರೋಪ ಪಟ್ಟಿಯಲ್ಲಿ ದಾಖಲೆ ಸಮೇತ ಉಲ್ಲೇಖಿಸಿದ್ದಾರೆ.
‘ಸುಂದರ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದ ರಾಹುಲ್, ಅವರನ್ನು ಪಾರ್ಟಿಗಳಿಗೆ ಆಹ್ವಾನಿಸಿ ಡ್ರಗ್ಸ್ ಸೇವಿಸುವಂತೆ ಮಾಡುತ್ತಿದ್ದ. ಕಾಗದದಲ್ಲಿ ಗಾಂಜಾ ಸುತ್ತಿ ಗೆಳತಿಯ ಜೊತೆ ಸೇವಿಸುತ್ತಿದ್ದ ಫೋಟೊಗಳು ಆತನ ಮೊಬೈಲ್‌ನಲ್ಲಿ ಲಭ್ಯವಾಗಿವೆ’ ಎಂಬ ಅಂಶ ಪಟ್ಟಿಯಲ್ಲಿದೆ.
'ಪ್ರಕರಣದ 14ನೇ ಆರೋಪಿ ಆಗಿರುವ ಅರ್ಚನಾ ಮನೋಹರ್ ಗಲ್ರಾನಿ ಅಲಿಯಾಸ್ ಸಂಜನಾ ಗಲ್ರಾನಿ, ಇಂದಿರಾನಗರದ ದೂಪನಹಳ್ಳಿಯ ಸಾಯಿ ತೇಜ್ ಶೈನ್ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನಲ್ಲಿ ವಾಸವಿದ್ದಳು. ರಾಹುಲ್ ತೋನ್ಸೆ ಹಾಗೂ ನಿಯಾಸ್ ಅಹಮ್ಮದ್‌ನನ್ನು ಹಲವು ಬಾರಿ ಮನೆಗೆ ಕರೆಸಿದ್ದ ಸಂಜನಾ, ಡ್ರಗ್ಸ್ ಸಮೇತ ‘ಆಫ್ಟರ್ ಪಾರ್ಟಿ’ ಮಾಡಿರುವುದು ದೃಢಪಟ್ಟಿದೆ.
‘ನೈಜೀರಿಯಾ ಪ್ರಜೆ ಜಾನ್ ಅಲಿಯಾಸ್ ಬೆನಾಲ್ಡ್ ಉಡೇನ್ನಾ ಎಂಬಾತನೇ ಆರೋಪಿಗಳಿಗೆ ಕೊಕೇನ್, ಎಂಡಿಎಂಎ ಹಾಗೂ ಗಾಂಜಾ ಪೂರೈಕೆ ಮಾಡಿದ್ದ. ಪಕ್ಕದ ಮನೆಯ ನಿವಾಸಿಯೊಬ್ಬರನ್ನು ನೈಜೀರಿಯಾ ಪ್ರಜೆ ಬಳಿ ಕಳುಹಿಸಿದ್ದ ಸಂಜನಾ, ಅವರ ಮೂಲಕ ಡ್ರಗ್ಸ್ ತರಿಸಿದ್ದಳು. ಇದೇ ವಿಚಾರವಾಗಿ ನಿವಾಸಿಯ ಪತ್ನಿಯು ಸಂಜನಾ ಜೊತೆ ಗಲಾಟೆ ಸಹ ಮಾಡಿದ್ದರು’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.
PublicNext
30/08/2021 10:57 pm