ಲಕ್ನೋ: ನಡು ರಸ್ತೆಯಲ್ಲೇ ಕ್ಯಾಬ್ ಚಾಲಕನೋರ್ವನ ಶರ್ಟ್ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪುಂಡಾಟ ಮೆರೆದ ಯುವತಿಯ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಲಕ್ನೋ ನಗರದ ಅವಧ್ ಸಿಗ್ನಲ್‌ನಲ್ಲಿ ಜುಲೈ 30ರಂದು ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯಾಬ್ ಚಾಲಕ ಸಾದತ್ ಅಲಿ ಸಿದ್ದಿಕಿ, ಮಹಿಳೆಯು ನನ್ನ ಫೋನ್ ಅನ್ನು ಒಡೆದರು. ಘಟನೆ ಬಳಿಕ ಪೊಲೀಸರು ನನ್ನ ಎಫ್ಐಆರ್ ದಾಖಲಿಸಿ, 24 ಗಂಟೆಗಳ ಕಾಲ ಲಾಕಪ್‌ನಲ್ಲಿ ಇರಿಸಿದ್ದರು ಎಂದು ತಿಳಿಸಿದ್ದಾರೆ.
ಆಗಿದ್ದೇನು?:
ಲಕ್ನೋನ ಅವಧ್ ವೃತ್ತದಲ್ಲಿ ಜುಲೈ 30ರಂದು ಯುವತಿಯು ವಾಹನ ಬರುತ್ತಿದ್ದರೂ ಲೆಕ್ಕಿಸದೇ ರಸ್ತೆ ದಾಟಲು ಮುಂದಾಗುತ್ತಾಳೆ. ಈ ವೇಳೆ ಇದೇ ಮಾರ್ಗವಾಗಿ ಬಂದ ಕ್ಯಾಬ್‌ಗೆ ಯುವತಿ ಅಡ್ಡ ಹಾಕಿದ್ದಾಳೆ. ಅಷ್ಟೇ ಅಲ್ಲದೆ ಏಕಾಏಕಿ ಕ್ಯಾಬ್ ಚಾಲಕನ ಬಳಿ ಬಂದು ಹಲ್ಲೆ ನಡೆಸಲು ಆರಂಭಿಸಿದ್ದಾಳೆ.
ಕ್ಯಾಬ್‌ನಿಂದ ಚಾಲಕನನ್ನು ಹೊರಗೆ ಎಳೆದು ನಡು ರಸ್ತೆಯಲ್ಲೇ ಆತನ ಶರ್ಟ್ ಹಿಡಿದು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಗಲಾಟೆ ಮಧ್ಯೆ ಕ್ಯಾಬ್ ಡ್ರೈವರ್‌ನನ್ನು ರಕ್ಷಿಸಲು ಬಂದ ವ್ಯಕ್ತಿ ಕೂಡ ಯುವತಿಯಿಂದ ಹಲ್ಲೆಗೊಳಗಾಗಿದ್ದಾರೆ. ಇದರಿಂದ ವಿಚಲಿತಗೊಂಡ ಕ್ಯಾಬ್ ಚಾಲಕ, ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡುವಂತೆ ಸ್ಥಳೀಯರಿಗೆ ಮನವಿ ಮಾಡಿಕೊಂಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
PublicNext
03/08/2021 04:32 pm