ಪುಣೆ : ಜಗತ್ತು ಎಷ್ಟೇ ಮುಂದುವರೆದಿದ್ದರೂ ಇನ್ನೂ ಕೊಳಕು ಮನಸ್ಥಿತಿ ಹಾಗೂ ಮೂಢನಂಬಿಕೆಗಳಿಗೆ ಕಟ್ಟು ಬಿದ್ದು ಕೆಲವು ವಿಚಿತ್ರ ಆಚರಣೆಗಳನ್ನು ಮಾಡುವ ಜನ ಸಮಾಜದಲ್ಲಿದ್ದಾರೆ ಎನ್ನುವದಕ್ಕೆ ಈ ಘಟನೆ ಹಸಿ ಸಾಕ್ಷಿ..
ಪೌರಾಣಿಕ ಪುರುಷರು ತಮ್ಮ ಪತ್ನಿಯ ಶೀಲದ ಮೇಲೆ ಸಂಶಯ ವ್ಯಕ್ತಪಡಿಸಿ ಅವರಿಗೆ ಪರೀಕ್ಷೆ ಒಡ್ಡಿದಂತಹ ಅನೇಕ ಘಟನೆಗಳನ್ನು ಕೇಳಿದ್ದೇವೆ. ಅದೇ ರೀತಿ ಈ ಕಲಿಗಾದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಶೀಲ ಪರೀಕ್ಷಗೆ ಕುದಿಯುವ ಎಣ್ಣೆಯಲ್ಲಿ ಕೈಹಾಕಿ ಕ್ರೌರ್ಯತೆ ಮರೆದಿರುವ ಘಟನೆ ಮಹಾರಾಷ್ಟ್ರದ ಉಸ್ಮಾಬಾದ್ ಜಿಲ್ಲೆಯ ಪರಾಂಡದಲ್ಲಿರುವ ಕಚಪುರಿ ಚೌಕ್ ನಲ್ಲಿ ನಡೆದಿದೆ.
ಇಲ್ಲಿಯ ಸ್ಥಳೀಯ ನಿವಾಸಿಯಾದ ಕಾರು ಚಾಲಕ ಮತ್ತು ಪತ್ನಿಯ ನಡುವೆ ಫೆ.11ರಂದು ಜಗಳ ನಡೆಯುತ್ತದೆ. ಈ ವೇಳೆ ಗಂಡನ ಮೇಲೆ ಕೋಪಗೊಂಡ ಪತ್ನಿ ಹೇಳದೇ ಕೇಳದೆ 4 ದಿನ ಮನೆ ಬಿಟ್ಟು ಹೋಗುತ್ತಾಳೆ. ಐದನೇ ದಿನ ಪತ್ನಿ ಮರಳಿ ಮನೆಗೆ ಬರುತ್ತಿರುವುದಾಗಿ ಪತಿಗೆ ಹೇಳುತ್ತಾಳೆ.
ಜಗಳದ ನಂತರ ಮನೆ ಬಿಟ್ಟ ದಿನದಂದು ಆಕೆ ಕಚಪುರಿ ಚೌಕ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿರುತ್ತಾಳೆ. ಈ ವೇಳೆ ಇಬ್ಬರು ಪುರುಷರು ಬಂದು ಆಕೆಯನ್ನು ಬಲವಂತವಾಗಿ ಬೈಕ್ ನಲ್ಲಿ ಕರೆದೊಯ್ಯುತ್ತಾರೆ. ನಾಲ್ಕು ದಿನಗಳ ತಮ್ಮೊಂದಿಗೆ ಇರಿಸಿಕೊಂಡಿದ್ದರು. ಆದರೆ, ಏನೂ ನಡೆದಿಲ್ಲ ಎನ್ನುತ್ತಾಳೆ. ನಾಲ್ಕನೇ ದಿನ ಹೇಗೋ ಅವರಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಪತಿಯ ಮುಂದೆ ವಿವರಿಸುತ್ತಾಳೆ.
ಆದಾಗ್ಯು ಆಕೆಯ ಪತಿ ಯಾವುದನ್ನು ನಂಬದೆ ಅವಳ ಶೀಲದ ಮೇಲೆ ಸಂಶಯ ವ್ಯಕ್ತಪಡಿ ಆಕೆ ಶೀಲ ಪರೀಕ್ಷಿಸಲು ಮುಂದಾಗುತ್ತಾನೆ.
ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಸುರಿದು ಅದು ಕುದಿಯುವ ವೇಳೇ ಅದರೊಳಗೆ 5 ರೂ. ನಾಣ್ಯವನ್ನು ಹಾಕಿ, ಅದನ್ನು ಬರಿಗೈನಿಂದ ತೆಗೆಯುವಂತೆ ಪತ್ನಿಗೆ ಹೇಳುತ್ತಾನೆ. ನೀನು ತಪ್ಪು ಮಾಡಿದ್ದರೆ ನಿನ್ನ ಕೈಕಾಲುಗಳು ಸುಡುತ್ತವೆ ಎಂದಿದ್ದಾನೆ.
ಗಂಡನ ಕಿರುಕುಳ ಹಾಗೂ ಬಲವಂತಕ್ಕೆ ಮಣಿದ ಪತ್ನಿ ನಾಣ್ಯ ತೆಗೆಯಲು ಮುಂದಾಗಿ ಕುದಿಯುವ ಎಣ್ಣೆಗೆ ಕೈಹಾಕುತ್ತಾಳೆ. ಆದರೆ, ಇದರಿಂದ ಆಕೆ ಕೈ ಸುಟ್ಟುಕೊಳ್ಳುತ್ತಾಳೆ. ಇಷ್ಟು ದೃಶ್ಯವನ್ನು ಪತಿರಾಯ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
PublicNext
24/02/2021 02:09 pm